Monday, January 9, 2023

ಕೆವನ್ ಚಾಂಡ್ಲರ್ - ಒಬ್ಬ ಅಸಾಮಾನ್ಯ ವ್ಯಕ್ತಿ

 

ಕೆವನ್ ಚಾಂಡ್ಲರ್ - ಒಬ್ಬ ಅಸಾಮಾನ್ಯ ವ್ಯಕ್ತಿ

ಸ್ನೇಹವೆಂದರೆ  ವಯಸ್ಸು ಲಿಂಗ ಜಾತಿ ಮತ ಬೇಧವಿಲ್ಲದೆ ಒಬ್ಬರಿಗೊಬ್ಬರು ಸಹಾಯ ಪ್ರೀತಿ ಹಂಚಿಕೊಳ್ಳುವ ಒಂದು ಬಾಂಧವ್ಯ. 

ನಾವು ಈಗ ಪರಿಚಯಿಸುವ ಇಲ್ಲೊಬ್ಬ ವ್ಯಕ್ತಿ ವಿಭಿನ್ನವಾಗಿ ಕಾಣುತ್ತಾರೆ ಹಾಗೆಯೆ ಆತನ ಸ್ನೇಹಿತರೂ ವಿಭಿನ್ನವೇ... 

ಆತನ ಹೆಸರು ಕೆವನ್ ಚಾಂಡ್ಲರ್

ಕೆವನ್ ಚಾಂಡ್ಲರ್ ತನ್ನ ಹೆತ್ತವರು ಮತ್ತು ಇಬ್ಬರು ಒಡಹುಟ್ಟಿದವರೊಂದಿಗೆ ಅಮೆರಿಕಾದ ಉತ್ತರ ಕೆರೊಲಿನಾದ ತಪ್ಪಲಿನಲ್ಲಿ ಬೆಳೆದರು. ಮನೆಯಲ್ಲಿ ಕಿರಿಯರಾದ ಕೆವನ್, ಅವರು ಅಪರೂಪದ ನರಸ್ನಾಯುಕ ಕಾಯಿಲೆಯಾದ ಬೆನ್ನುಮೂಳೆಯ ಸ್ನಾಯು ಕ್ಷೀಣತೆ - Spinal Muscular Atrophy (SMA) ಎಂಬ ರೋಗದಿಂದ ಬಳಲುತ್ತಿದ್ದಾರೆ.

ಈಗ ಕೆವನ್ ರ ವಿಶೇಷತೆ ಏನು ಎಂಬುದನ್ನು ತಿಳಿದುಕೊಳ್ಳೋಣ. 

ತಾನೊಬ್ಬ ಅಂಗವಿಕಲ ಎಂದು ಎಷ್ಟೋ ಜನರು ತಮ್ಮ ತಮ್ಮಅಂಗವಿಕಲತೆಯನ್ನೇ ದೌರ್ಭಾಗ್ಯವೇ ಸರಿ  ಜೀವನ ಅಂಧಕಾರದಲ್ಲಿ ಮುಳುಗಿತು ಎನ್ನುವ ಕಾಲದಲ್ಲಿ ಈ ಕೆವನ್ ಎಂಬ ಕೈ, ಕಾಲು ಇಲ್ಲದ ವ್ಯಕ್ತಿ ತನ್ನ ಸಾಮರ್ಥ್ಯಕ್ಕೂ ಮೀರಿ ವಿಶಿಷ್ಟ ಸಾಧನೆಗಳನ್ನು ಮಾಡಿದ್ದಾರೆ. ಬರಿ ಅವರೊಬ್ಬರೇ ಅಲ್ಲ ಅವರ ಜೊತೆಯಲ್ಲಿರುವ ಸ್ನೇಹಿತರೂ ಸಹ ವಿಶಿಷ್ಟ ಸಾಧನೆಗಳಿಗೆ  ಜೊತೆಗೂಡಿದ್ದಾರೆ.

ಕೆವನ್ ಚಾಂಡ್ಲರ್ ಹೇಳಿಕೊಂಡ ಹಾಗೆ 

"ನನ್ನ ಹೆಸರು ಕೆವನ್ ಚಾಂಡ್ಲರ್. ನಾನು 35 ವರ್ಷ ವಯಸ್ಸಿನವನಾಗಿದ್ದೇನೆ ಮತ್ತು ನನ್ನ ಸುಂದರ ಪತ್ನಿ ಕೇಟಿಯೊಂದಿಗೆ ಫೋರ್ಟ್ ವೇನ್, ಇಂಡಿಯಾನಾ ಪೊಲೀಸ್ ನಲ್ಲಿ ವಾಸಿಸುತ್ತಿದ್ದೇನೆ. ನಾನು ಬೆನ್ನುಮೂಳೆಯ ಸ್ನಾಯು ಕ್ಷೀಣತೆ (SMA) ಎಂಬ ಕಾಯಿಲೆಯೊಂದಿಗೆ ಹುಟ್ಟಿದ್ದೇನೆ, ಇದು ನನ್ನ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ, ಇದರಿಂದ ನಾನು ನಡೆಯಲು ಸಾಧ್ಯವಿಲ್ಲ. ನಾನು ಸಾಮಾನ್ಯವಾಗಿ ತಿರುಗಾಡಲು ಗಾಲಿಕುರ್ಚಿಯನ್ನು ಬಳಸುತ್ತೇನೆ, ಆದರೆ ಪ್ರಯಾಣಕ್ಕಾಗಿ ನನ್ನ ಅತ್ಯುತ್ತಮ ಸಂಪನ್ಮೂಲ ಎಂದರೆ ಅದು ಗೆಳೆತನವಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ."

2015 ನೇ ಇಸವಿಯಲ್ಲಿ ಕೆವನ್ ತನ್ನ ಓದಿನ ನಂತರ ತನ್ನ ಗೆಳೆಯರಿಗೆ ಯೂರೋಪ್ ಪ್ರವಾಸ ಮಾಡಲು ಬಯಸುತ್ತಾರೆ. ಎಲ್ಲರಂತೆ ತಾನೂ ಸಹ ಈ ಸುಂದರವಾದ ಪ್ರಪಂಚ ನೋಡಬೇಕೆಂದು ಬಯಸಿದಾಗ ಕೆವನ್ ನ ಸ್ನೇಹಿತರು ಹಣ ಸಂಗ್ರಹಿಸಿ  "We Carry Kevan" ಎಂಬ ಒಂದು ಅಭಿಯಾನವನ್ನು ಆರಂಭಿಸಿದರು. ಚಿಕ್ಕಮಕ್ಕಳನ್ನು ಕೂಸುಮರಿ - piggy back ಮಾಡುವ ಹಾಗೆ ಒಂದು ವಿಶೇಷ  Kid Carry Backpack ಕೆವನ್ ಗಾಗಿ ಸಿದ್ಧಪಡಿಸಿ ಅದನ್ನು ಅಳವಡಿಸಿಕೊಂಡು, ಎಲ್ಲೆಲ್ಲಿ ಗಾಲಿ ಕುರ್ಚಿ ಹೋಗಲು ಆಗುವುದಿಲ್ಲವೋ ಅಲ್ಲಲ್ಲಿ ಈ ವಿಶೇಷ   Kid Carry Backpack ನಲ್ಲಿ ತಮ್ಮ ಗೆಳೆಯ ಕೆವನ ನನ್ನು ಕೂರಿಸಿಕೊಂಡು ಗಾಲಿಕುರ್ಚಿಯನ್ನು ಮನೆಯಲ್ಲೇ ಬಿಟ್ಟು ೩ ವಾರಗಳ ಯೂರೋಪ್ ಪ್ರವಾಸವನ್ನು ಕೈಗೊಂಡರು. ಆ ಪ್ರವಾಸದಲ್ಲಿ ಫ್ರಾನ್ಸ್, ಜಾಂಗೊ ರೆನ್‌ಹಾರ್ಡ್‌ನ ಮನೆಗೆ ಭೇಟಿ ನೀಡಲು; ಇಂಗ್ಲೆಂಡ್, ಕೆನ್ಸಿಂಗ್ಟನ್ ಮತ್ತು ಐರ್ಲೆಂಡ್ ಜಗತ್ತನ್ನು ಅನ್ವೇಷಿಸಲು, ಸ್ಕೆಲ್ಲಿಗ್ ಮೈಕೆಲ್ ದ್ವೀಪವನ್ನು ಧೈರ್ಯದಿಂದ ಎದುರಿಸಲು ಪ್ರವಾಸ ಯಶ್ಶಸ್ವಿಯಾಗಿ ಮಾಡಿದರು. 

"ಈ ಸ್ನೇಹಿತರೊಟ್ಟಿಗೆ ಹೋದ ಸ್ಥಳಗಳು, ಪ್ರತಿದಿನ ಆಸಕ್ತಿದಾಯಕ ಅನುಭವಗಳಿಂದ ತುಂಬಿರುತ್ತಿತ್ತು" ಎಂದು ಕೆವನ್ ನೆನಪಿಸಿಕೊಳ್ಳುತ್ತಾರೆ. ಅವರು ಪ್ಯಾರಿಸ್‌ನ ಬೀದಿಗಳಲ್ಲಿ ನೃತ್ಯ ಮಾಡಲು ಅವಕಾಶ ಸಿಕ್ಕಿತು, ಇಂಗ್ಲಿಷ್ ಗ್ರಾಮಗಳ ಮೂಲಕ ಪಾದಯಾತ್ರೆ ಮಾಡಿದರು ಮತ್ತು ಐರ್ಲೆಂಡ್‌ನ ಕರಾವಳಿಯ ಸ್ಕೆಲ್ಲಿಗ್ ಮೈಕೆಲ್ ದ್ವೀಪವನ್ನು ಸಹ ಅಳೆಯುತ್ತಾರೆ!

ಕೆವನ್ ಹೇಳುವಂತೆ "ಈ ಅದ್ಭುತ ಅನುಭವದ ನಂತರ, ನನ್ನ ಸ್ನೇಹಿತರು ಮತ್ತು ನಾನು ಪ್ರವಾಸ ಮಾಡಿದಂತೆ ಇತರ ವಿಕಲಾಂಗ ಜನರೂ  ತಮ್ಮ ಜೀವನದಲ್ಲಿ ಪ್ರವಾಸ ಮಾಡಲು ನಾನು ಬಯಸಿದೆ. ಅದರಿಂದ  We Carry Kevan ಅಧಿಕೃತವಾಗಿ ಸಂಘಟಿತವಾದ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿ ಮಾರ್ಪಟ್ಟಿತು. ಬೆನ್ನು ಮೂಳೆ ತೊಂದರೆಗೆ ಒಳಪಟ್ಟ ವಿಕಲಾಂಗ ಕುಟುಂಬಗಳಿಗೆ ಹೆಚ್ಚು ಆರೈಕೆ ಒದಗಿಸಲು ಈ ಸಂಸ್ಥೆ ಸಹಾಯ ಮಾಡಲು ಪ್ರಾರಂಭಿಸಿದೆ. "

2018 ರಲ್ಲಿ ಕೆವನ್ ತಮ್ಮ  ಆರು ಗೆಳೆಯರೊಂದಿಗೆ ಮತ್ತೊಂದು ದೊಡ್ಡ ಪ್ರವಾಸವನ್ನು ಕೈಗೊಂಡರು, "ಈ ಬಾರಿ ಚೀನಾಕ್ಕೆ ಪ್ರವಾಸ ಹೋದೆವು. ಅಲ್ಲಿ ನಾವು ಕೆಲವು ನಂಬಲಾಗದ ವಿಷಯಗಳನ್ನು ನೋಡಿದ್ದೇವೆ ಮತ್ತು ಮಹಾಗೋಡೆಯ ಮೇಲೆ ನಡೆದಿದ್ದೇವೆ. ನಾವು ವಿಕಲಾಂಗ ಮಕ್ಕಳ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿದ್ದೇವೆ, ಬ್ಯಾಕ್‌ಪ್ಯಾಕ್ ಮತ್ತು ಭರವಸೆಯ ಸಂದೇಶವನ್ನು ಹಂಚಿಕೊಂಡಿದ್ದೇವೆ" ಎಂದು ಹೆಮ್ಮೆಯಿಂದ ಕೆವನ್ ಹೇಳಿಕೊಳ್ಳುತ್ತಾರೆ. 

ಕೆವನ್ ನಿರೀಕ್ಷಿದಂತೆ, ಅವನು ತನ್ನ ಸ್ನೇಹಿತೆ ಮತ್ತು ಜೀವನ ಸಂಗಾತಿ ಕೇಟಿ ಯನ್ನು ಭೇಟಿಯಾದರು. ಕೆವನ್ ಮತ್ತು ಆತನ ಸ್ನೇಹಿತರು ಚೀನಾದಲ್ಲಿ ಪ್ರಯಾಣಿಸುತ್ತಿದ್ದಾಗ, ಅವರು ವಿಕಲಾಂಗ ಮಕ್ಕಳ ಆರೈಕೆ ಕೇಂದ್ರದಲ್ಲಿ ಒಂದು ವಾರ ಕಳೆದರು. ಅಲ್ಲಿ ಅವರು ತಮ್ಮ ಕನಸಿನ ಹುಡುಗಿ ಕೇಟಿಯನ್ನು ಭೇಟಿಯಾದರು, ಅವರು ಲಾಭರಹಿತವಾಗಿ ಸಂಸ್ಥೆಯಲ್ಲಿ ಕೆಲಸ ಮಾಡಿದರು ಮತ್ತು 2 ವರ್ಷಗಳ ನಂತರ ಅವರು ಮದುವೆಯಾದರು. 

ಕೆವನ್ ಜಾನ್ ವೆಸ್ಲಿ ಕಾಲೇಜಿನಿಂದ ಕೌನ್ಸೆಲಿಂಗ್‌ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಆತ ಒಬ್ಬ ಅತ್ಯಾಸಕ್ತಿಯ ಕಥೆಗಾರ, ಕೆವನ್ ತನ್ನ ಸ್ನೇಹಿತರೊಂದಿಗೆ ತನ್ನ ಸಾಹಸಗಳ ಆತ್ಮಚರಿತ್ರೆ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.  ಮತ್ತು ಅಂಗವೈಕಲ್ಯದೊಂದಿಗೆ ತನ್ನ ಅನನ್ಯ ಜೀವನದ ಬಗ್ಗೆ ಪ್ರಪಂಚದಾದ್ಯಂತ ಮಾತನಾಡುತ್ತಾರೆ. ಅವರು ವೀ ಕ್ಯಾರಿ ಕೆವನ್ - We Carry Kevan ಎಂಬ ಲಾಭೋದ್ದೇಶವಿಲ್ಲದ ಸಂಸ್ಥೆಯ ಸ್ಥಾಪಕರೂ ಆಗಿದ್ದಾರೆ. ಇಂದು ಆ ಸಂಸ್ಥೆ ಸುಮಾರು ಪ್ರಪಂಚದಾದ್ಯಂತ ೩೦ ದೇಶಗಳಲ್ಲಿ  ೬೫೦ ಕುಟುಂಬಗಳಿಗೆ ಸಹಾಯ ಮಾಡುತ್ತಿದೆ.

"ಅವರ ಈ ಪ್ರವಾಸ ಸಾಹಸವು ಅವರನ್ನು ಮುಂದೆ ಎಲ್ಲಿ ಕೊಡೊಯ್ಯುತ್ತದೆ ಎಂಬುದನ್ನು ಕಾಯಲು ಸಾಧ್ಯವಿಲ್ಲದೆ ಮುಂದಿನ ಪ್ರವಾಸಕ್ಕೆ ಅಣಿಯಾಗುತ್ತಿದ್ದಾರೆ"

ಹೆಚ್ಚಿನ ವಿವರಗಳಿಗೆ "https://wecarrykevan.org/" ವೆಬ್ ಸೈಟ್ ಅನ್ನು ಸಂದರ್ಶಿಸಬಹುದು.

ಆತನ ಭಾಷಣವನ್ನು  TED.com ನಲ್ಲಿ ಹಾಗೆ ಪ್ರವಾಸ ಮಾಡಿದ ವಿಡಿಯೋಗಳನ್ನು YouTube ನಲ್ಲಿಯೂ ಸಹ ನೋಡಬಹುದಾಗಿದೆ. 

ಕೃಪೆ: www.brightside.com & www.medium.com


Wednesday, February 16, 2022

ಕವಿತಾ ಸಂಕಲನ


ಪ್ರೀತಿಗೆ 

ನೀನೆಂದರೆ ನನಗೆ ಆಗಸ
ನೀನೆಂದರೆ ನನಗೊಂದು ವಿಶ್ವಾಸ
ರವಿಯಾಗದಿದ್ದರೂ ಚಂದ್ರನಾಗುವೆಯೇನೋ ಎಂಬ ನಿರೀಕ್ಷೆ
ಕೊನೆಗೆ ನಕ್ಷತ್ರವಾದರೂ ಸರಿಯೇ ಎಂಬ ಪ್ರತೀಕ್ಷೆ

ನೀನೆಂದರೆ ಒಮ್ಮೆ ಅಭಿಮಾನ
ಒಮ್ಮೆ ಅನುಮಾನ
ಹೃದಯವ ಕಾಯುವ ಕಾವಲುಗಾರ
ಪ್ರೀತಿ ಪರಿಣಯದ ಸಾಕ್ಷಾತ್ಕಾರ
ಗಾಳಿ ಬಂದರೂ 
ನೀನೆಂದರೆ ಅನುದಿನದ ಅನುಪಲ್ಲವಿ
ನವರಾಗ ಪಡಿನುಡಿಯಲ್ಲವೀ
ಕೊನೆಗೊಮ್ಮೆ ಹಂಬಲ.. ಆ ಪ್ರೀತಿಯಲ್ಲೇನೋ ಕುತೂಹಲ

------------------------------------------------------------------------------------------------------------------------


ಮರಳಿನ ಚಿತ್ರ 

ನನ್ನ ನಿನ್ನ ಪ್ರೀತಿ 
ಮರಳ ಮೇಲಿನ ಚಿತ್ರದ ರೀತಿ 
ಗಾಳಿ ಬಂದರೂ ಅಳಿಸಿ ಹೋಗುತ್ತೆ 
ನೀರು ಬಂದರೂ ಅಳಿಸಿಹೋಗುತ್ತೆ 







Tuesday, April 21, 2020

ಸಿನಿಮಾ - ಮನೋರಂಜನೆ

ಸಿನಿಮಾನೋರಂನೆ

ಬಹಳ ದಿನಗಳಿಂದ ಇದನ್ನ ಬರೆಯಬೇಕು ಅಂತ ಅನಿಸುತ್ತಾ ಇತ್ತು ಸಮಯ ಕೂಡಿ ಬಂದಿರಲಿಲ್ಲ. ಈ ಲಾಕ್ ಡೌನ್ ಸಮಯದಲ್ಲಿ ಇದರ ಬಗ್ಗೆ ಆಲೋಚಿಸುತ್ತಾ ಕನ್ನಡ ಹಾಗು ಇನ್ನಿತರ ಸಿನಿಮಾಗಳ ಸಮೀಕರಣ - similarities ರಿಮೇಕ್- remake ಸಿನಿಮಾಗಳ, ಗೀತೆಗಳ, ಸನ್ನಿವೇಶಗಳ ಬಗ್ಗೆ ವಿಮರ್ಶಿಸೋಣ ಅಂತ ಈ ಬರೆಹವನ್ನ ಕೈಗೆತ್ತಿಕೊಂಡಿದ್ದೇನೆ. ಇದರಲ್ಲಿ ಯಾವುದೇ ವ್ಯಕ್ತಿಯ, ಸಿನಿಮಾಗಳ ವೈಚಾರಿಕತೆಗೆ ಕುಂದು ತರುವಂತ ಉದ್ದೇಶವಿಲ್ಲ. ಇದು ಬರಿಯ ಮನೋರಂಜನೆಗಾಗಿ ಮತ್ತು ತಿಳುವಳಿಕೆಗಾಗಿ ಅಷ್ಟೇ. 

ಕನ್ನಡ ಚಲನಚಿತ್ರ ಎಂದಾಕ್ಷಣ ಮೊದಲಿಗೆ ಡಾ. ರಾಜಕುಮಾರ್ ಅವರ ಸಿನಿಮಾಗಳಿಂದಲೇ  ಆರಂಭಿಸೋಣ. 

ಆಸ್ಕರ್ ಪ್ರಶಸ್ತಿಗೆ ಹೊರಟ 1957 ರ ಹಿಂದಿಯ ಚಿತ್ರ "ಮದರ್ ಇಂಡಿಯಾ" ಇದರಲ್ಲಿ ಬರುವ ಸನ್ನಿವೇಶಗಳು, 4 ಪಾತ್ರಧಾರಿಗಳು ಯಥಾವತ್ತಾಗಿ ಇಳಿದದ್ದು 1974ರ ಕನ್ನಡದ "ಸಂಪತ್ತಿಗೆ ಸವಾಲ್" ಚಿತ್ರದಲ್ಲಿ. 
ವಿಧವೆ ತಾಯಿ, ಆಕೆಗೆ ಇಬ್ಬರು ಮಕ್ಕಳು ಒಬ್ಬ ಪುಂಡ, ಮತ್ತೊಬ್ಬ ವಿಧೇಯ ಮಗ. ಪುಂಡ ಮಗನನ್ನು ರೇಗಿಸುವ ಜಗಳಗಂಟಿ ಕುಲಕರ್ಣಿಯ ಮಗಳು. ಈ ನಾಲ್ಕು ಪಾತ್ರಗಳು "ಧುತ್ತರಗಿ" ಅವರ ನಾಟಕದಲ್ಲಿ ಸೇರಿ ಹೋಗಿವೆ. ಕೆಲ ಸನ್ನಿವೇಷಗಳಂತೂ ಭಟ್ಟಿ ಇಳಿಸಿದಂತಿವೆ. 


ನರ್ಗಿಸ್ - ಎಂ. ವಿ. ರಾಜಮ್ಮ, ರಾಜೇಂದ್ರಕುಮಾರ್ - ರಾಜ ಶಂಕರ್, 
ಸುನಿಲ್ ದತ್ತ್ - ರಾಜ್ ಕುಮಾರ್, ಚಂಚಲ್ - ಮಂಜುಳಾ ಪಾತ್ರಗಳು ಒಂದೇ ರೀತಿಯಾಗಿವೆ. 
"ಮದರ್ ಇಂಡಿಯಾ" ಮಹಿಳಾ ಪ್ರಧಾನವಾಗಿದ್ದರೆ,  "ಸಂಪತ್ತಿಗೆ ಸವಾಲ್" ಪುರುಷ ಪ್ರಧಾನ ಚಿತ್ರ.  ಒಮ್ಮೆ ಎರಡೂ ಚಿತ್ರಗಳನ್ನ ನೋಡಿ ಆನಂದಿಸಿ. 
=========

ಹಾಗೆ ಮತ್ತೊಂದು ಚಿತ್ರ ಹಿಂದಿಯ 1952 ರ ದಿಲೀಪ್ ಕುಮಾರ್ ಚಿತ್ರ "ಆನ್" ಮತ್ತು 1976 ರ ರಾಜ್ ಕುಮಾರ ರ "ಬಹಾದುರ್ ಗಂಡು" ಚಿತ್ರ. ಇದು ಅಪ್ಪಟ ರಿಮೇಕ್ ಅಂತಲೇ ಹೇಳಬಹುದು. ಷೇಕ್ಸ್ಪಿಯರ್ ನ   ನಾಟಕವೊಂದರ ಆಧಾರಿತ ಹಿಂದಿ ಚಿತ್ರದ ದಿಲೀಪ್ ಕುಮಾರ್, ನಿಮ್ಮಿ, ನಾದಿರಾ ಹಾಗು ಪ್ರೇಮ್ ನಾಥ್ ಪಾತ್ರಗಳನ್ನ ರಾಜ್ ಕುಮಾರ್, ಆರತಿ, ಜಯಂತಿ ಹಾಗು ವಜ್ರಮುನಿ ಸೂಪರ್ ಹಿಟ್ ಆಗುವಂತೆ ನಟಿಸಿದ್ದಾರೆ. 
ಹಲವು ಸನ್ನಿವೇಶಗಳು, ಗೀತೆಗಳು ಸಂಪೂರ್ಣವಾಗಿ ಹಿಂದಿ ಚಿತ್ರದಂತೆಯೇ ಮೂಡಿ ಬಂದಿದೆ.
ಯಾವುದಕ್ಕೂ ತುಲನೆ ಮಾಡಿ ನೋಡಬೇಡಿ, ಆಯಾ ಚಿತ್ರಗಳಲ್ಲಿ ಅದರದ್ದೇ ವೈಶಿಷ್ಟ್ಯಗಳಿವೆ 
ಆಯಾ ಕಾಲಕ್ಕೆ ತಕ್ಕಂತೆ ಮಾರ್ಪಾಡುಗೊಂಡಿವೆ.
=========
ಕನ್ನಡದ್ದೇ ಚಿತ್ರ ಮತ್ತೆ ಕನ್ನಡದಲ್ಲಿಯೇ ಅಲ್ಪ ಸ್ವಲ್ಪ ಬದಲಾವಣೆಗೊಂಡು ತೆರೆಗೆ ಬಂದಿದೆಯೆಂದರೆ ಆಶ್ಚರ್ಯವೇ ಸರಿ. 1952 ರ "ಪೆಳ್ಳಿ ಚೇಸಿ ಚೂಡು" ನ ರಿಮೇಕ್ 1965 ರ "ಮದುವೆ ಮಾಡಿ ನೋಡು" ಚಿತ್ರ 1984 ರಲ್ಲಿ "ಶ್ರಾವಣ ಬಂತು" ಚಿತ್ರವಾಗಿ ತೆರೆಗೆ ಬಂದಿತು. 
hi
ಅಲ್ಲಿ ವರದಕ್ಷಿಣೆ ವಿಷಯ ಇದ್ದರೆ "ಶ್ರಾವಣ ಬಂತು" ಚಿತ್ರದಲ್ಲಿ ಜಾತೀಯತೆ ಆಧಾರಿತ ಚಿತ್ರವಾಗಿತ್ತು. ನರ್ಸ್(ಸರಸ್ವತಿ) ಎರಡೂ ಚಿತ್ರದಲ್ಲೂ (ಲೀಲಾವತಿ-ಊರ್ವಶಿ) ಕಾಣಿಸಿಕೊಂಡಿದ್ದಾಳೆ. ನಾಯಕ ಹುಚ್ಚನಾಗಿ ಡಾ. ರಾಜ್ ಅಮೋಘ ಅಭಿನಯವುಂಟು. ಎರಡೂ ಚಿತ್ರಗಳು ಸೂಪರ್ ಡೂಪರ್ ಚಿತ್ರಗಳೇ. ಹಾಡುಗಳಂತೂ ಎವರ್ ಗ್ರೀನ್. 
===========


"ಓ.. ನಲ್ಲನೆ ಸವಿಮಾತೊಂದ ನುಡಿವೆಯಾ" ಹಾಡಂತೂ ಸದಾ ಗುನುಗುನಿಸುವ  ಹಾಡೇ ಸರಿ. ಭವಾನಿ-ರಜನೀ ಕಾಂತ್ ಅಭಿನಯದ ಈ ಹಾಡು ಕೇಳಲಷ್ಟೇ ಅಲ್ಲದೆ ನೋಡಲೂ ಸುಂದರ ಗೀತೆ. ಇದೇ ಭಾವ ಸಾರಂಶವಿರುವ ಹಾಡು ಹಿಂದಿಯಲ್ಲಿ "ಹಾಥ್ ಕೀ ಸಫಾಯಿ" ಚಿತ್ರದಲ್ಲಿ "ವಾದಾ ಕರ್ ಲೇ ಸಾಜ್ನಾ...." ಎಂಬ ಗೀತೆಯಾಗಿ ಮೂಡಿ ಬಂದಿದೆ. ಹಿಂದಿ ಚಿತ್ರವೂ ಅಷ್ಟೇ ನಮ್ಮ "ಸಹೋದರರ ಸವಾಲ್" ಚಿತ್ರದ ರಿಮೇಕ್.  ಎರಡೂ ಹಾಡುಗಳು ಸುಂದರ ಸುಮಧುರ. 
==========
"ಬಾ ನಲ್ಲೆ ಮಧುಚಂದ್ರಕೆ..." ಎಂದಾಕ್ಷಣ "ಆ ಬೆಟ್ಟದಲ್ಲಿ.. ಬೆಳದಿಂಗಳಲ್ಲಿ ..." ಎಂಬ ಸಿದ್ಧಲಿಂಗಯ್ಯ ನವರ ಕವಿತೆ ಚಿತ್ರಗೀತೆಯಾಗಿ ಹಂಸಲೇಖ ರ ಸಂಗೀತದಲ್ಲಿ ಸುಮಧುರವಾಗಿ ಬಂದದ್ದು ನೆನಪಾಗ್ತಿದೆ. 1993 ರಲ್ಲಿ ಬಿಡುಗಡೆಯಾದ ಸುಮಾರು 9 ವರ್ಷದ ನಂತರ ಅದೇ ಗೀತೆಯ ಸಾರಾಂಶವೆನಿಸುವ ಹಿಂದಿಯ ಗೀತೆ 2002 ರಲ್ಲಿ "ಸಾಥಿಯ...ಮರ್ದಮ್ ಮರ್ದಮ್ ತೇರಿ ಗೀಲಿ ಹಸೀನ್ ... " ಗುಲ್ಜಾರ್ ರ ಹಾಡು "ಸಾಥಿಯಾ" ಚಿತ್ರದಲ್ಲಿ ಫಿಲಂಫೇರ್ ಪ್ರಶಸ್ತಿ ಪಡೆಯಿತು. ಎರಡೂ ಗೀತೆಗಳಲ್ಲಿ ಒಂದೇ ತೆರನಾದ ಸಾಹಿತ್ಯ, ಭಾವ ಸನ್ನಿವೇಶಗಳು ಮೂಡಿವೆ. ಆದರೆ ಅದರ ಕಾಪಿರೈಟ್ ಹಕ್ಕು ಯಾರಿಗೂ ಸೇರಿಲ್ಲ.  ಮೊದಲು ಇದು ಕನ್ನಡದಲ್ಲಿ ಬಂದದ್ದು ಅಂತ ಹೆಮ್ಮೆ

==========
ಪುನೀತ್ ಚಿತ್ರ "ಅರಸು", ಗೀತೆ "ಪ್ರೀತಿ.. ಪ್ರೀತಿ"ಯಲ್ಲಿನ ಕೆಲವು ಸಾಲುಗಳು 2000 ದ ಹಿಂದಿ ಚಿತ್ರ "ಪುಕಾರ್", "ಕಿಸ್ಮತ್ ಸೆ ತುಮ್ ಹಮ್ ಕೋ ಮಿಲೇ ಹೊ" ಎಂಬ ಗೀತೆಯಿಂದ ಆರಿಸಿ ತಂದದ್ದು





"ಒಂದು ಭಾವ ಮತ್ತೊಂದು ಕವಿತೆ..." ಈ ಸಾಲನ್ನು ಕೇಳಿದರೆ ತಿಳಿಯುವುದು. ಅಲ್ಲವಾ ಸೇಮ್ ಟು ಸೇಮ್. 
=================
"ಏಹ್ ದಿಲ್ ದೀವಾನಾ ಹೈ , ದೀವಾನಾ ದಿಲ್ ಹೈ... " ಇದು 1970 ರ  "ಇಷ್ಕ್ ಪರ್ ಜೋರ್ ನಹಿ" ಚಿತ್ರದ್ದು. ಇದೆ ರೀತಿಯ ರಾಗವಿರುವ ಹಾಡು ಕನ್ನಡದಲ್ಲಿ "ಕಸ್ತೂರಿ ನಿವಾಸ" ದ "ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ, ಸೋತೆ ನಾನಾಗ" ಎಂದಾಗಿದೆ. 

ಸಂಗೀತ ನಿರ್ದೇಶಕ ಜಿ. ಕೆ. ವೆಂಕಟೇಶ್ ಒಂದು ಸಂದರ್ಶನದಲ್ಲಿ ಹಿಂದಿ ಗೀತೆಯಿಂದ ಸ್ಫೂರ್ತಿ ಪಡೆದದ್ದು ಎಂದು ಹೇಳಿಕೊಂಡಿದ್ದಾರೆ. ಎರಡೂ ಗೀತೆಗಳು ಸೂಪರ್. 
==========================
ಅನಂತ್-ಲಕ್ಷ್ಮಿಸೂಪರ್ ಜೋಡಿಯ ಸೂಪರ್ ಹಾಡು "ಮಿಲನ ಕಾಣದು ಭೂಮಿ ಬಾನು", "ಮುದುಡಿದ ತಾವರೆ ಅರಳಿತು" ಚಿತ್ರದಲ್ಲಿದೆ. ಅದೇ ರಾಗದ ಜಯ ಬಾಧುರಿ ನಟನೆಯ "ಮೇರಾ ಜೀವನ್ ಕೋರ ಕಾಗಜ್ ಕೋರಾ ಹಿ ರಹೇ ಗಯಾ" ಗೀತೆ  "ಕೋರ ಕಾಗಜ್" ಚಿತ್ರದಲ್ಲಿ ಮೂಡಿದೆ. ನೋಡಿ ...ಎರಡೂ ದುಃಖ ಗೀತೆಗಳೇ

======================
"ಮೇರೇ ಅಂಗನೆ ಮೇ ತುಮ್ಹಾರಾ ಕ್ಯಾ ಕಾಮ್ ಹೈ" ಈ ಸೂಪರ್ ಹಾಡು ಯಾರು ಕೇಳಿಲ್ಲ ಇದನ್ನು ಕದ್ದು ತಂದದ್ದು ಕನ್ನಡದಿಂದ. ಹಾಡು ಪೂರ್ತಿಯಾಗಿ ನೆನಪು ಬರ್ತಿಲ್ಲ ಚಿತ್ರ "ಕೆಸರಿನ ಕಮಲ" . ಚರಣದಲ್ಲಿ "ಇವಳ ಹೆಸರು ರೂಪ, ಕಣ್ಣು ಹೊಳೆವ ದೀಪ... ಅಯ್ಯಯ್ಯೋ ಈ ಹುಡುಗಿ ಉದ್ದ... ಉದ್ದಗಿದ್ದರೆ ಏನಂತೆ ಏಣಿಯೇ ಬೇಡ ನಿನಗಂತೇ" ಇಂತಿದೆ. ವಿಡಿಯೋ ಸಿಕ್ಕರೆ ಹಾಕುವೆ ಅಲ್ಲಿಯವರೆಗೂ ಅಮಿತಾಬ್ ನ ಈ ವಿಡಿಯೋ ನೋಡಿ 


================













Wednesday, July 13, 2016

|| ಚುಟುಕುಗಳು ||


ಇದುವೇ ನನ್ನ ಮೊಬೈಲು ,
ಇರಲಿ ಇಲ್ಲದಿರಲೀ ನೆಟ್ ವರ್ಕ್  ಸಿಗ್ನಲ್ಲು ,
ಇರಲಿ ಕಾಡು - ಮೇಡು, ಬಟಾ-ಬಯಲು,
ಜೊತೆಗೆ ಇರುವುದು ಇರುಳು ಹಗಲು
ಬೆಡ್ ರೂಮ್ ತಲೆ ದಿಂಬಲೂ, 
ಟಿವಿ, ಟೇಬಲ್ ಮೇಲೂ, 
ಸಿಗುವುದು ಎಲ್ಲಂದಲ್ಲೂ,
ಆನಂದ ಅದರಲ್ಲಿ ಬರುವ ಆಪ್, ಚಿತ್ರ, ಹಾಡು ಸಾಲು, 
ಸಮಯ ಸಂದರ್ಭ ಇಲ್ಲ ನೋಡಲು,
ಕೊಡುವೆ ಅದಕ್ಕೊಂದು ಸ್ಥಾನ ಮೀಸಲು,  
ಬಿಟ್ಟರೂ ಬಿಡದೆ ಕಾಡುವ ನನ್ನ ಮೊಬೈಲು.
======================================================
ಏನಾಗುವೆಯೋ ಪುಟ್ಟಾ
ಏನಾಗುವೆಯೋ ?
ಅಮ್ಮ ಹೇಳ್ತಾಳೆ ಆಗು ಇಂಜಿನಿಯರ್
ಅಪ್ಪ ಹೇಳ್ತ್ತಾನೆ ಆಗು ಡಾಕ್ಟರ್
ಅಕ್ಕ ಹೇಳುವಳು ಆಗು ಆಫೀಸರ್
ಏನಾಗುವೆಯೋ ಪುಟ್ಟಾ
ಏನಾಗುವೆಯೋ.... ?
=======================================================
ಆಸೆಗಳೆಂದರೆ ಹೀಗೆ 
ಹಕ್ಕಿಯ ಹಾಗೆ 
ಅದುಮಿಟ್ಟರೆ ಕುಟುಕುವುದು 
ತೆರೆದಿಟ್ಟರೆ ಹಾರುವುದು




Thursday, June 30, 2016

ಅಪ್ಪ..!!

ಅಂದು ತನ್ನ ಹೆಂಡತಿಯ ಬೈಗುಳದಿಂದ ಸಾಕಾಗಿದ್ದ ರಾಜೀವ. ಸದಾ ಗೊಣಗುತ್ತಿದ್ದ ತಂದೆಯನ್ನು ವೃದ್ಧಾಶ್ರಮಕೆ ಸೇರಿಸಲು ಅರ್ಜಿಯನ್ನು ತುಂಬಿಸುತ್ತಿದ್ದ. ಒಬ್ಬನೇ ಮಗ ನಾನು ಎಲ್ಲವೂ ಇದೆ ಹಣ, ಮನೆ, ಹೆಂಡತಿ, ಇಬ್ಬರು ಮಕ್ಕಳು, ತನ್ನ ಖಾಸಗಿತನಕ್ಕೆ ಅಡ್ಡಿಯಾಗಿರುವ ಅಪ್ಪ.
ಪ್ರತಿನಿತ್ಯ ಸುಧಾ ಅಪ್ಪನ ಬಗ್ಗೆ ಕೊಂಕು ಹೇಳುತ್ತಲೇ ಇದ್ದಳು.

"ಅವರು ಟಾಯ್ಲೆಟ್ ನಲ್ಲಿ ನೀರು ಹಾಕಿಲ್ಲ, ಬೆಡ್ ಮೇಲೆ ಉಚ್ಚೆ, ಚಪಾತಿ ಪಲ್ಯ ಅರ್ಧ ತಿಂದಿದ್ದಾರೆ, ಮಕ್ಕಳಿಗೆ ಓದೋದಿಕ್ಕೆ ಬಿಡದೆ ಅವರೊಂದಿಗೆ ಯಾವಾಗಲೂ ಆಟ. ಮನೆಗೆ ತನ್ನವರು ಬಂದಾಗ ಮಾತನಾಡಿಸೋಲ್ಲ, ಇಂಗ್ಲಿಷ್ ನ್ಯೂಸ್ ಪೇಪರ್ ತರೋಲ್ಲ, ಸದಾ ಅವರು ಹಾಕಿದ್ದ ಟಿ ವಿ ಚಾನೆಲ್ ನೋಡ್ಬೇಕು....." ಹೀಗೆ ಅಪ್ಪನ ವಿರುದ್ಧ ಇತರೆ ಅಪವಾದ ಪಟ್ಟಿಯನ್ನ ಒಪ್ಪಿಸುತ್ತಿದ್ದಳು.

ತನಗೂ ಅಷ್ಟೇ

ಏನಾದರೋ ಹೊಸ ವಸ್ತು ತಂದರೆ "ಯಾಕೋ ರಾಜೀವ ಇಷ್ಟು ಬೆಲೆ ಕೊಟ್ಟು ತಂದೆ?, ಮಾರ್ಕೆಟ್ ನಲ್ಲಿ ಇನ್ನು ಕಡಿಮೆ ಸಿಗೋದು, ಅವರು ಯಾರು?, ಇವತ್ತು ಯಾರ ಜೊತೆ  ಬಂದೆ, ಪೆನ್ಶನ್ ದುಡ್ಡು ತಗೊಂಡು ಬಾ, ಭಾನುವಾರ ವಾಕಿಂಗ್ ಕರ್ಕೊಂಡು ಹೋಗು, ಹೊಸ ಮೊಬೈಲ್ ಕೊಡಿಸು, ಮನೇಲಿ ಒಬ್ಬನೇ ಇರೋಕೆ ಆಗಲ್ಲ ಕೇಬಲ್ ಹಾಕಿಸು, ಶನಿವಾರ ಕಬ್ಬನ್ ಪಾರ್ಕು, ಲಾಲ್ ಬಾಗ್ ಸುತ್ತಿಸು.. ಅಬ್ಬಾ ಇಷ್ಟು ವಯಸ್ಸಾದ್ರೂ ಆಸೆ ಹೋಗಿಲ್ವಾ ಅಪ್ಪನಿಗೆ. ಅಮ್ಮ ಇದ್ದಿದ್ರೆ ಇನ್ನೆಷ್ಟು ಕಾಟ ಕೊಡ್ತಾ ಇದ್ದನೋ ಅಪ್ಪ.  ಮುವ್ವತ್ತು ವರ್ಷದಿಂದ ಅಮ್ಮನ ನೋಡಿದ ನೆನಪೇ ನನಗೆ ಇಲ್ಲ." ಎಂದುಕೊಳ್ಳುತ್ತ ವೃದ್ಧಾಶ್ರಮದ ಅರ್ಜಿಯನ್ನು ತುಂಬಿಸಿ ಕೊಟ್ಟು, ಅಪ್ಪ ಉಪಯೋಗಿಸುತ್ತಿದ್ದ ಬಟ್ಟೆ, ವಸ್ತುವನ್ನೆಲ್ಲ ಟ್ರಂಕ್ ನಲ್ಲಿ ಹಾಕಿಟ್ಟು  ಅಲ್ಲಿದ್ದ ಮ್ಯಾನೇಜರ್ ಕೊಟ್ಟ.

"ಹಬ್ಬ, ಹರಿದಿನ ಇದ್ದಾಗ ಬಂದು ಕರಕೊಂಡು ಹೋಗ್ತಿರೋ?"ಎಂದ ಮ್ಯಾನೇಜರ್.

"ಹಬ್ಬಗಳಿಗೆ ಏನೂ ಕರಕೊಂಡು ಬರೋದು ಬೇಡ, ಮಾಡಿರೋದನ್ನೇ ಕೊಟ್ಟು ಬನ್ನಿ" ಎಂದ ಸುಧಾಳ ಮಾತು ಕಿವಿಯಲ್ಲೇ ರಿಂಗಣಿಸಿತು.

"ಹಾ, ಆ ಸರ್, ಬರ್ತೀನಿ ನೋಡೋಣ " ಎಂದುತ್ತರಿಸಿದ ರಾಜೀವ.

"ಏನ್ ಜನಗಳೋ ಏನೋ" ಎಂದು ಅಂದುಕೊಳ್ಳುತ್ತ ಮ್ಯಾನೇಜರ್, ಅಪ್ಪನ ಟ್ರಂಕ್ ತೆಗೆದುಕೊಂಡು,
ಅಪ್ಪ ಕುಳಿತಲ್ಲಿಗೆ ಬಂದು "ಬನ್ನಿ ಸಾಮಿ, ನಿಮ್ಮ ಜಾಗಕೆ ಹೋಗೋಣ " ಎಂದು ಅಪ್ಪನನ್ನ ಎಬ್ಬಿಸಿಕೊಂಡು ಹೊರಟು ಹೋದ. ಅಪ್ಪ ಹಿಂತಿರುಗಿ  ರಾಜೀವನನ್ನು ನೋಡಲೇ ಇಲ್ಲ.

"ಎಷ್ಟು ಅಹಂ  ಅಪ್ಪನಿಗೆ. ತಿರುಗಿ ನೋಡಲಿಲ್ಲವಲ್ಲ, ಇರೋ ಒಬ್ಬ ಮಗ ಅನ್ನೋ ಮಮಕಾರ ಇಲ್ಲವಲ್ಲ, ಏನೋ  ನಾವಾಗಿದ್ದಕ್ಕೆ ವೃದ್ಧಾಶ್ರಮದಲ್ಲಿ ಬಿಟ್ಟಿದ್ದೀನಿ, ಬೇರೆ ಯಾರಾದ್ರೂ ಆಗಿದ್ರೆ ಬೀದಿ ಭಿಕಾರಿ ಮಾಡ್ತಾ ಇದ್ರು.. ತೊಂದರೆ ತಪ್ಪಿತು" ಎಂದು ಮನಸಲ್ಲೇ ಅಂದುಕೊಳ್ಳುತ್ತ ಮನೆ ಕಡೆ ಹೆಜ್ಜೆ ಹಾಕಿದ.

ಮೂರು-ನಾಲ್ಕು ದಿನಗಳ ನಂತರ ಅದೇ ವೃದ್ಧಾಶ್ರಮದಿಂದ "ಈ ವರ್ಷದಿಂದ ಆಶ್ರಮದ ಶುಲ್ಕ ಎರಡು ಸಾವಿರ ಜಾಸ್ತಿಯಾಗಿದೆ, ಬಂದು ಕಟ್ಟಿ ಹೋಗಿ" ಅಂತ  ರಾಜೀವನಿಗೆ ಕರೆ ಬಂದಿತು.

"ಓ! ಇದು ಬೇರೆ, ಇಂದು ಸಂಜೆನೇ ಬಂದು ಕಟ್ಟುತ್ತೀನಿ ಸರ್" ಎಂದು ಹೇಳಿ ಸಂಜೆ ವೃದ್ಧಾಶ್ರಮಕ್ಕೆ ಹೊರಟ.

ಹಣ ಕಟ್ಟಿ ಅಪ್ಪ ಎಲ್ಲಿದ್ದಾನೋ ನೋಡಿ ಬರುವ ಒಮ್ಮೆ ಅಲ್ಲಿನ ಅಂಗಳಕ್ಕೆ ಬರುವಾಗಲೇ ಅಲ್ಲಿನ ಸಿಬ್ಬಂದಿ ವರ್ಗದ ಜೊತೆ ಅನ್ನೋನ್ಯವಾಗಿ ಅಪ್ಪ ಅವರ ಹೆಗಲ ಮೇಲೆ ಕೈ ಹಾಕಿ, ಕುಲು ಕುಲು ಎಂದು ನಗಾಡುತ್ತಾ ಮಾತನಾಡುತ್ತಿರುವುದು ಕಂಡಿತು ರಾಜೀವನಿಗೆ. ಅವನಿಗೆ ಆಶ್ಚರ್ಯವಾಗಿತ್ತು. 'ಎಲ್ಲರೂ ವೃದ್ಧಾಶ್ರಮ ಎಂದರೆ ಜೈಲ್ನಲ್ಲಿ ಇರುವಂತೆ ಅನ್ನುತ್ತಿದ್ದರೂ ಅಪ್ಪ ಹೀಗೆ ಖುಷಿಯಾಗಿ ಇದ್ದಾರಲ್ಲ ಹೇಗೆ?'  ಎಂದು ಯೋಚಿಸಿ ಅಲ್ಲಿ ಇದ್ದ ವೃದ್ಧಾಶ್ರಮದ ಸಿಬ್ಬಂದಿ ವರ್ಗದ ಕೊಠಡಿ ಹೋಗಿ ಅಲ್ಲಿದ್ದ ವ್ಯಕ್ತಿಯನ್ನು ಕರೆದು,
"ಅಲ್ಲಿದ್ದಾರಲ್ಲ ಆ ವ್ಯಕ್ತಿ , ಇಲ್ಲಿನ ಜನಗಳಿಗೆ ಎಷ್ಟು ವರ್ಷದಿಂದ ಗೊತ್ತು? ಅಷ್ಟೊಂದು ಅನ್ನೋನ್ಯವಾಗಿ ಮಾತಾಡುತ್ತಿದ್ದಾರಲ್ಲ?" ಎಂದು ಕೇಳಿದ.

"ಯಾರು ಸಾರ್, ಆ ನೀಲಿ ಶರ್ಟ್ ಹಾಕಿದ್ದರಲ್ಲ ಅವರಾ ? ಸುಮಾರು ವರ್ಷದಿಂದ ಗೊತ್ತು ಸಾರ್ ಅವರು ಸುಮಾರು ಮೂವತ್ತು ವರ್ಷದ ಹಿಂದೆ ನಮ್ಮದೇ ಅನಾಥಾಶ್ರಮದಿಂದ ಒಂದು ಅನಾಥ ಗಂಡು ಮಗುನ  ದತ್ತು ತಗೊಂಡು ಹೋಗಿದ್ರು ಸಾರ್, ಅವಾಗಿಂದ ಪರಿಚಯ ಸಾರ್. ಪ್ರತಿವರ್ಷ ಆ ಮಗು ಹುಟ್ಟು ಹಬ್ಬಕ್ಕೆಇಲ್ಲಿ  ಬಂದು ಸಿಹಿ ಹಂಚ್ತಾರೆ.. ಅಂದ ಹಾಗೆ ತಾವು ಯಾರು ಸಾರ್..? " ಎಂದು ಆ ವ್ಯಕ್ತಿ ರಾಜೀವನನ್ನ ಕೇಳಿದ.

---
ಇದು ಮುಂಬಯಿ ಆಕಾಶವಾಣಿ, ವಿವಿಧ ಭಾರತಿ ಯಲ್ಲಿ ಕೇಳಿದ ಒಂದು ಪೋಸ್ಟ್ ಕಾರ್ಡ್ ಕಥೆಯ ಎಳೆಯನ್ನು ವಿಸ್ತರಿಸಿ ಬರೆದದ್ದು.

Tuesday, November 6, 2012

ನಗುವ ನಯನ - Nikon D5100 Camera snaps

Ramadan Lamp at Radisson Blu Hotel, Cairo, Egypt
Add caption
Add caption
ನಕ್ಷತ್ರ 



ಭಾರತೀಯ-ಸಾಂಪ್ರದಾಯಿಕ-ಉಡುಗೆ- ಸೀರೆ : ಸೆರಗು, ಅಂಚು 
Soujanya: Nalina DJ 










Sunday, October 14, 2012

ತಪ್ಪಿ ಹೋಯಿತಲ್ಲೇ ಚುಕ್ಕಿ

ಕವಿ:  ಬಿ. ಆರ್. ಲಕ್ಷ್ಮಣ್ ರಾವ್ 

------------------

ಕವಿ:  ದೇ. ಸಿ ಕುಲಕರ್ಣಿ 
===============
ಕವಿ: ಜಿ. ಎಸ್. ಎಸ್