Tuesday, October 21, 2008

ನೆನಪೊಳಗೆ


ಮನಸ್ಸೆಂಬೋ ಅಂಗಳದಾಗೆ ನೆನಪುಗಳು ನೂರು.. ಸಾವಿರ.. ಲಕ್ಷ ನಕ್ಷತ್ರಗಳಂತೆ
ಕೆಲವು ಮಿಂಚುತ್ತಲೇ ಇರುತ್ತವೆ, ಕೆಲವು ದೂರ ಬೀಳುವ ನಕ್ಷತ್ರ ಗಳಾಗಿ ಮರೆಯಾಗಿ ಹೋಗುತ್ವೆ....
ಈಗೀಗ ರಾತ್ರಿ ವೇಳೆ ಆಕಾಶ ನೋಡುವರಾರು?

ಅದೋ ಅಲ್ಲಿ ' ಚಂದ್ರ ' .. ಬರ್ತಾನೆ ನಿನ್ನ ಕೈಯಲ್ಲಿರೋ ಚಾಕೊಲೆಟ್ ನ ತಿಂತಾನೆ.. ಬೇಗ ತಿನ್ನು .. ಅನ್ನುವ ಅಮ್ಮಈಗ ಟಿ ವಿ ಯಲ್ಲಿ ಬರುವ ಅದೇ ರಾಗ , ಅದೇ ತಾಳದ ಧಾರಾವಾಹಿ ಗಳನ್ನ ನೋಡುತ್ತಾ ಸುಂದರ ಚಿತ್ತಾರದ ರಾತ್ರಿಗಳನ್ನ ಅಲ್ಲಿಯೇ ಕಳೆಯುತ್ತಿದ್ದಾಳೆ.
ಮಗು ಅತ್ತರೆ ಟಿ ವಿ ಯಲ್ಲಿ ಯಾವುದೊ ಚಾನೆಲ್ ಹಾಕಿ ಅದೇ ಪ್ರಪಂಚ ಎನ್ನುವ ಹಾಗೆ ಮಗುವನ್ನ ಕೂರಿಸಿಬಿಡ್ತಾಳೆ ಇಂದಿನ ಅಮ್ಮ. ಮುಂದೆ ಎಂದಾದರು ಆ ಮಗು 'ಮಮ್ಮಿ .. ಅದೇನು ಸ್ಕೈ ನಲ್ಲಿ ಏನೋ ಇದೆ' ಅಂದ್ರೆ ಅದು ಅವಳಿಗೆ ಗೊತ್ತಾಗುತ್ತೋ ಇಲ್ವೋ.. 'ಸುಮ್ಮನೆ ಗೂಗಲ್ ನೋಡಿ ತಿಳ್ಕೋ ಟೈಮ್ ಇಲ್ಲ' ಅನ್ನಬಹುದೇನೋ?
ಮೊದಲೆಲ್ಲ ವಿಜ್ಞಾನಿಗಳು ಆಕಾಶವನ್ನ ಬರಿಗಣ್ಣಿಂದ ನೋಡಿ ನೋಡಿ ಅದು ಚಂದ್ರ ನಕ್ಷತ್ರ, ಸೂರ್ಯ, ಗ್ರಹ , ಉಲ್ಕೆ, ಧೂಮಕೇತು ಎಂದೆಲ್ಲ ಹೆಸರಿಟ್ಟರು. ಈಗ ಏನಿದ್ದರೂ ಉಪಗ್ರಹ ಹಾರಿಸು ಅಲ್ಲಿಂದ ನಾವಿರೋ ಭೂಮಿಯನ್ನೇ ನೋಡು ಇಲ್ಲ ಸುತ್ತ ಮುತ್ತ ಹುಡುಕಿ ಭೂಮಿಗೆ ಇಲ್ಲ ಇನ್ನಿತರ ಗ್ರಹಗಳಿಗೆ ಅಪ್ಪಳಿಸೋ ಉಲ್ಕೆ, ಧೂಮಕೇತು ಗಳನ್ನ ಕರಾರುವಕ್ಕಾಗಿ ತಿಳಿದುಕೊಳ್ತಾರೆ.
ಮೊದಲೆಲ್ಲ ಬೆಂಗಳೂರಲ್ಲಿ ಶುಭ್ರವಾಗಿರೋ ಆಕಾಶ ನೋಡುವುದು ಖುಷಿ ಆಗ್ತಿತ್ತು.
ಸಂಜೆಯೆಲ್ಲ ಓರಗೆಯವರೊಂದಿಗೆ ಆಟವಾಡಿ ಸುಸ್ತಾಗಿ ಹೋಂ ವರ್ಕ್ ಬರೆದು, ಊಟ ಮಡಿ ಮತ್ತೊಮ್ಮೆ ಮಲಗುವ ಮುನ್ನ ಹೊರಗೆ ಬಂದಾಗ "ಅಲ್ಲಿ ನೋಡ್ರೋ ನಕ್ಷತ್ರ ಬೀಳ್ತಾ ಇದೆ.. ಈ ಕಡೆ ಈ ಕಡೆ .. ಅಲ್ಲೇ ಶಿವನ ಹಳ್ಳಿ ( ಈಗ ಅದು ಶಿವ ನಗರ ಆಗಿದೆ) ಹತ್ರ.. ಬಿದ್ರೆ ಅಲ್ಲಿ ಯಾರಾದ್ರೂ ಸಾಯ್ತಾರೆ.." ಅಂತ ಭಯ ಬೀಳಿಸೋ ಗೆಳೆಯರು. ಮೊದಲು ಕೆಲವರು ಸತ್ತರೆ ನಕ್ಷತ್ರ ಆಗ್ತಾರೆ ಅನ್ನೋ ನಂಬಿಕೆ ಇತ್ತು. ಈಗ ಯಾವುದೇ ಮಕ್ಕಳ್ಳನ್ನ ಕೇಳಿ ಅದೇನು ಅಂದ್ರೆ stars ಅಂಕಲ್ ಅಂತಾರೆ. ಆಗೆಲ್ಲ ದೊಡ್ಡವರು ಅಲ್ಲಿಂದ ನಮ್ಮನ್ನ ನೋಡ್ತಾ ಇರ್ತಾರೆ.. ಕೆಟ್ಟ ಕೆಲಸ ಮಾಡಬಾರದು ಅನ್ನೋ ವಿಷಯವನ್ನ ಹೀಗೆ ಹೇಳಿ ನಮ್ಮನ್ನ ಹದ್ದುಬಸ್ತಿ ನಲ್ಲಿ ಇಡ್ತಾ ಇದ್ದರು. ಈಗ technology ಮುಂದುವರೆದು ಎಲ್ಲ ವಿಷಯಗಳನ್ನ ತಿರುಗ ಮುರುಗ ಮಾಡುವ ಹಂತಕ್ಕೆ ಬಂದಿದ್ದೇವೆ.
ಬೇಸಿಗೆಯಲ್ಲಿ ನಮಗೆಲ್ಲ ಮನೆ ಚಾವಣಿ ಮೇಲೆ ಮಲಗೋ ಆಸೆ. ಹಾಗೆ ಒಂದೆರಡು ಬಾರಿ ಮಲಗಿ ಚಳಿಗೆ ಒದ್ದಾಡಿ ಮತ್ತೆ ಬೆಳಗಿನ ಜಾವ ಮನೆಯೊಳಗೇ ಮಲಗಿದ್ದು ಆಗಿದೆ. ಹಾಗೆ ಮೇಲೆ ಮಲಗಿದ್ದಾಗ ಮೇಲೆ ಕಪ್ಪು ಆಕಾಶ ಥರ ಥರ ಬೆಳಕು ಬೀರುವ ಚಿಕ್ಕ ದೊಡ್ಡ ನಕ್ಷತ್ರಗಳು, ಪಕ್ಕದಲ್ಲಿ ಮಲಗಿದ್ದವನಿಗೆ ಕೇಳಿದರೆ ಅದು ನಮ್ಮ ತಾತ , ಅದು ನಮ್ಮಜ್ಜಿ. ನಿಮ್ಮ ಅಜ್ಜಿ ಎಲ್ಲೋ ? ಎಂದು ಕೇಳಿದಾಗ 'ಅಗೋ ಅಲ್ಲಿ' ಅಂತ ಯಾವದನ್ನೋ ತೋರಿಸುತ್ತಿದ್ದ ಮತ್ತೊಬ್ಬ ಗೆಳೆಯ. ಸುಮ್ಮನೆ ಮಲಕೊಳ್ಳಿ ಅನ್ನು ಚಿಕಪ್ಪ, ಮಾವಂದಿರು. 'ಮಾವ .. ಚಂದ್ರ ಯಾಕೆ ನಮ್ಮ ಮೇಲೆ ಬೀಳೋಲ್ಲ' ಅಂತ ಕೇಳುವ ಪಕ್ಕದ ಮನೆಯ ಪುಟ್ಟ ಹುಡುಗ.. ಏನೋ ಹಾರಿಕೆಯ ಉತ್ತರ ಕೊಟ್ಟು 'ಮಲಕ್ಕೋ ಇಲ್ಲಾಂದ್ರೆ ಕಳ್ಳ ಬರ್ತಾನೆ..' ಎಂದು ಹೆದರಿಸುವ ಮಾವ.

ಹೀಗೆ ಒಮ್ಮೆ ನಾನು 2 ನೆ ತರಗತಿಯಲ್ಲಿರಬೇಕಾದರೆ ಚಂದ್ರ ಗ್ರಹಣ ನೋಡುವ ಸಂದರ್ಭ ಬಂದಿತ್ತು. ನೋಡಿದಾಗ ನಾನಂತೂ ಹೆದರಿದ್ದೆ. ಅದೇ ಮೊದಲ ಬಾರಿ ಪೂರ್ಣ ಚಂದ್ರಗ್ರಹಣ ನೋಡಿದ್ದು. ತಾಮ್ರದ ತಟ್ಟೆಯಂತೆ ಹೊಳೆವ ಚಂದ್ರ ಅದರ ಸುತ್ತ ಹೆಚ್ಚಾಗಿ ಹೊಳೆವ ನಕ್ಷತ್ರಗಳು. ಆಗ ಈ ವಿಸ್ಮಯ ನೋಡಿ ಭಯಪಟ್ಟಿದ್ದೆ. ಆದ್ರೆ ಇಲ್ಲಿಯವರೆಗೂ ಪೂರ್ಣ ಚಂದ್ರ ಗ್ರಹಣ ನೋಡುವ ಅವಕಾಶ ಬರಲೇ ಇಲ್ಲ. ಅದಕ್ಕೆ ಅಂದಿದ್ದು "ಈಗೀಗ ರಾತ್ರಿವೇಳೆ ಆಕಾಶ ನೋಡುವರಾರು? ಅಷ್ಟೊಂದು ಬ್ಯುಸಿ ನಾವು..!! " ಎಲ್ಲವನ್ನು ಇಂಟರ್ನೆಟ್ ನಲ್ಲಿ ಹುಡುಕುವ ತಡಕಾಡುವ ತವಕ.
ಹಾ! ಒಮ್ಮೆ ಯಾವ ವರ್ಷ ಅಂತ ತಿಳಿದಿಲ್ಲ ನಮ್ಮ ಭೂಮಿಯ ಆಸುಪಾಸಿನ ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಬಂದಿದ್ದವು. ಅದನ್ನ ನೋಡಲು ಮಧ್ಯ ರಾತ್ರಿ ನಾವೆಲ್ಲ ಎದ್ದು ನೋಡಿದ್ದೆವು. ಅಬ್ಬ ! ಎಷ್ಟೊಂದು ವಿಚಿತ್ರ ರಾತ್ರಿಯ ಆಕಾಶ...ಆ ನೆನಪುಗಳು.
ಒಮ್ಮೆ ಹ್ಯಾಲೆ ಧೂಮಕೇತು ನಮ್ಮ ಭೂಮಿಯ ಸಮೀಪ ಬಂದಿತ್ತಂತೆ. ಸುಮಾರು ಬೆಳಗಿನ ಜಾವ 3 ಕ್ಕೆ ನಮ್ಮ ಮನೆಯವರೆಲ್ಲ ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಅದನ್ನ ಅಮ್ಮ ಹೇಳ್ತಾ ಇದ್ದರು.
ಇನ್ನು ರಾತ್ರಿ ವೇಳೆ ಮಹಡಿಯ ಮೇಲೆ ಮಲಗಿರುವಾಗ ನೋಡುವ ಆಕಾಶದಲ್ಲಿ ತೇಲುವ ಮೋಡಗಳೋ ಅದೆಷ್ಟು ವಿಚಿತ್ರ ವಿಸ್ಮಯ ಆಕಾರಗಳನ್ನ ಪಡೆಯುತ್ತೆ. ಒಮ್ಮೆ ಮನುಷ್ಯ, ಪ್ರಾಣಿ, ಏನೇನೋ ಆಕಾರಗಳು ಒಮ್ಮೆ ಬೆಚ್ಚಿ ಬೀಳಿಸುವ ಮಳೆ ಮೋಡಗಳು.. ಆ ಅನುಭವ ಮತ್ತೆ ಸವಿಯಲು ಸಾಧ್ಯವೇ ? ಅನಿಸುತ್ತೆ.
=====================
ಮುಂಜಾವು ಆಗುತ್ತಿದ್ದಂತೆ ಮೊದಲ ದಿನಗಳಲ್ಲಿ ತಮ್ಮಿಷ್ಟ ದೇವರಿಗೆ, ಇಷ್ಟವಾದವರನ್ನು ನೆನಸಿಕೊಂಡು, ಎರಡೂ ಕೈಗಳನ್ನು ನೋಡಿಕೊಂಡು ಇಂದಿನ ದಿನ ಶುಭವಾಗಲಿ.. ನನ್ನಿಂದ ಏನಾದ್ರೂ ಒಳ್ಳೆಯ ಕೆಲಸವಾಗಲಿ ಎಂದು ತಮ್ಮ ದಿನ ನಿತ್ಯ ಕಾರ್ಯಗಳಿಗೆ ಸಿದ್ಧವಾಗುತ್ತಿದ್ದರು. ತಮ್ಮ ಕಾರ್ಯಗಳಲ್ಲಿಯೂ ಸಹ ಒಳ್ಳೆಯದೇ ಆಗಲಿ ಎನ್ನುವವರೇ ಹೆಚ್ಚಿದರು. 
ಬೆಳಿಗ್ಗೆ 'ಕುಯಿ ಕುಯಿ' ಅನ್ನೋ ತಮ್ಮ ಮುದ್ದು ಮೊಬೈಲ್ ಫೋನ್ ನ ನೋಡಿ ಏಳುವುದು ಇಂದಿನ ದಿನಚರಿ. (ಅದು ನನ್ನಲ್ಲೂ ಇದೆ). ಇದು ನಮ್ಮ ತಂತ್ರಜ್ಞಾನ ಬದಲಾದಂತೆ ದಿನವೈಖರಿಗಳು ಬದಲಾಗುತ್ತಿವೆ. ಹಾಗಂತ ಎಲ್ಲವನ್ನ ಅಲಕ್ಷ್ಯ ಮಾಡುವುದಕ್ಕೆ ಸಾಧ್ಯವೇ..? 
ಇಂದಿನ ವಾಹನ ದಟ್ಟಣೆ, ಅತಿ ಜನ ಸಂಖ್ಯೆ, ದಿನದಿಂದ ದಿನಕ್ಕೆ ಬದಲಾಗುತ್ತಿರುವ  ತಂತ್ರಜ್ಞಾನ, ಬೆಲೆ ಏರಿಕೆ,  ಅದಕ್ಕೆ ಸರಿ ಹೊಂದದ ಆರ್ಥಿಕ ಪರಿಸ್ಥಿತಿ ಇರುವಾಗ ಪ್ರತಿದಿನ ನಾವು ಒಬ್ಬ ಪೋಲಿಸ್ / ಅಧಿಕಾರಿ ವರ್ಗ ತನ್ನ ದಿನಚರಿ ಶುರು ಮಾಡುವುದೇ ಒಂದು Lucky - ಅದೃಷ್ಟ ಜಾಗದಿಂದ ಅಂದರೆ ಅವನ ಮನಸಲ್ಲಿ ಇಂದು ಅಲ್ಲಿಗೆ ಹೋದರೆ ತಾನೆಷ್ಟು ಸರ್ಕಾರಿ ಸಂಬಳ ಅಲ್ಲದೆ ಕಮಾಯಿಸಬಹುದು  ಎಂದು ಅವನು ಹಾಸಿಗೆಯಿಂದ ಏಳುತ್ತಲೇ ಲೆಕ್ಕಾಚಾರ ಹಾಕಿರುತ್ತಾನೆ. 
ಅಲ್ಲಿರುವ ಟ್ರಾಫಿಕ್ ಕಡಿಮೆ ಮಾಡುವುದನ್ನ ಬಿಟ್ಟು ತನ್ನ ಮೊಬೈಲ್ ನಲ್ಲಿ ಮಾತಾಡಿಕೊಂಡು, ಇಲ್ಲದ ಸಲ್ಲದ ಕೆಟ್ಟ ಬೈಗುಳವನ್ನ ಉಗುಳಿ, ಅಲ್ಲಿ ಇಲ್ಲಿ ಸಿಗುವ ಬಿಟ್ಟಿ ಸಿಗರೆಟ್, ಊಟ, ದಿನ ಪತ್ರಿಕೆ,  ಉಚಿತ ಆಟೋ ರಿಕ್ಷಾ ಪ್ರಯಾಣ, ಹಫ್ತಾ ವಸೂಲ್, ಎಲ್ಲವು ಅವರ ದಿನಚರಿಗಳೇ. 
ಇನ್ನು ಕೆಲ ಅಧಿಕಾರಿಗಳದ್ದು ಕೆಲಸಕ್ಕೆ ತಕ್ಕಂತೆ ಹಣ. ಇಂತಿಷ್ಟು ಅಂತ ಕೊಟ್ಟರೇ ಆ ಕೆಲಸ ಮಾಡಿ ಮುಗಿಸುವುದು. ಇದು ಇತ್ತೀಚಿಗೆ ಖಾಸಗಿ ಕಂಪನಿಗಳಿಗೂ ಲಗ್ಗೆ ಇಟ್ಟಿದೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~


ಹಿಂದೊಮ್ಮೆ ಎಲ್ಲೋ ಓದಿದ ನೆನಪು. ಆತ ಕಡು ಬಡತನದ ಕುಟುಂಬದಿಂದ ಬಂದವ. ಉತ್ತಮ ವಿದ್ಯಾರ್ಥಿ ಹಾಗೆ ಒಳ್ಳೆ ಅಂಕಗಳನ್ನ ಪಡೆದು ವೈದ್ಯ ವೃತ್ತಿಯಲ್ಲಿ ಸಾಧನೆಗೈದು ವಿದೇಶಕ್ಕೆ ಹಾರಿದವನು ಮತ್ತೆಂದು ತನ್ನ ದೇಶಕ್ಕೆ ಬಾರದೆ ಹೋದನು.

ಇಲ್ಲಿ ಆತನ ತಂದೆ ತಾಯಿ. ತಂಗಿ ತಮ್ಮ ಹಾಸಲು ಹೊದೆಯಲು ಬಟ್ಟೆಯಿಲ್ಲದೆ ಕೂಲಿ ಮಾಡುವ ಸ್ಥಿತಿ. ಅಲ್ಲಿ ಆತನದು ಐಶಾರಾಮಿ ಜೀವನ.
ಮತ್ತೊಬ್ಬ ವೈದ್ಯನದೂ (ಮುಕ್ಕಾಲು ಪಾಲು ವೈದ್ಯರದು) ಇದೆ ಕಥೆ. ಬಡವ ಕಷ್ಟ ಪಟ್ಟು ವೈದ್ಯನಾದ. ಈಗ ಪ್ರತಿಷ್ಟಿತ  ಖಾಸಗಿ ಕಂಪನಿ ಯಲ್ಲಿ ವೈದ್ಯ. ಅಲ್ಲಿ ಬರುವ ರೋಗಿಗಳೆಲ್ಲ ತುಂಬಾ ಮೇಲ್ವರ್ಗದ ಜನರು. ಅಲ್ಲಿ ಅವನಿಗೆ ಕೈ ತುಂಬಾ ಸಂಬಳ,
ಎ ಸಿ ಕೊಠಡಿ, ಕಾರು ಎಲ್ಲ ಸಿಕ್ಕಿತು. ಈಗ ಅದರ ಜಗತ್ತಿನಿಂದ ಆತ ಹೊರಗೆ ಬರಲು ಇಷ್ಟ ಪಡುತ್ತಿಲ್ಲ. ಆದರೆ ಹಳ್ಳಿಗಾಡಿನ ಜನಸೇವೆ ಮಾಡಲು ಇವರಂತಹ ವೈದ್ಯರುಗಳು ಎಷ್ಟು ಇದ್ದರು ಸಾಲದು. ಇಂದಿನ ಆರ್ಥಿಕ ವ್ಯವಸ್ಥೆ ಏರಿಳಿತದಿಂದ ಕಂಗೆಟ್ಟ ಜನರು (ವೈದ್ಯರು ತಮ್ಮ ಸಂಬಳ ಹಾಗು ಫೀ ಅನ್ನು ಏರಿಸಿ ಕೊಂಡಿದ್ದಾರೆ). ಹಳ್ಳಿಗಾಡಿನ ಜನರ ಆರೋಗ್ಯ ಉದ್ದರಿಸಲು ಅವರೆಂದೂ ಕನಸು ಮನಸಲ್ಲೂ ನೆನಸಿರಲಾರರು.
ಇಂದಿನ ನಗರೀಕರಣದ ಹೊಡೆತ ಅತಿ ಕಡುಬಡತನದಲ್ಲಿರುವ ಪ್ರಜೆಗಳಿಗೆ ಕಾಣಸಿಗುವುದು. ಆ ಬಡತನದ ಬೇಗೆಯಿಂದ ಮೇಲೇಳಲು ಸಾಧ್ಯವೇ ಆಗುತ್ತಿಲ್ಲ. ಆಧುನಿಕತೆಗೆ ಮಾರುಹೋಗಿ ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ,  ರಾಜಕೀಯ ವ್ಯವಸ್ಥೆ ಎಲ್ಲವು ಅಂತಹವರನ್ನ ಮರೆತಿದೆ. ಒಂದೆಡೆ ವೈಭವೋಪೇತ ಮಾಲ್ ಗಳಿದ್ದರೆ ಮತ್ತೊಂದು ಕಡೆ ಮಳೆ ಸುರಿಯುತ್ತಿರುವ  ಛಾವಣಿಗಳು, ಕಿಟಕಿ ಬಾಗಿಲುಗಳು ಇಲ್ಲದ ಮನೆಗಳು ಇಂದಿಗೂ ಕಾಣಸಿಗುತ್ತಿವೆ. ಕೆಲವು ಹಳ್ಳಿಗಳಲ್ಲಿ ಮೂಲಭೂತ ವ್ಯವಸ್ಥೆ ಇಲ್ಲದೆ ಕೊಳಕು ರಾಜಕೀಯದ ಅವ್ಯವಸ್ಥೆಯಿಂದ ಕಡೆಗಣಿಸಿವೆ.
ಆ ವೈಭವಕ್ಕೆ ಮಾರುಹೋದ ಹಳ್ಳಿಗಾಡಿನ ಜನರು ತಮ್ಮ ತಮ್ಮ ಜಾನುವಾರು, ಕೃಷಿ ಭೂಮಿ, ಎಲ್ಲವನ್ನು ಮಾರಿಕೊಂಡು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಇದರಿಂದ ನಿಧಾನಗತಿಯಿಂದ ಬೆಳೆಯುತ್ತಿದ್ದ ನಗರಗಳು ಅತಿವೇಗವಾಗಿ ಸುವ್ಯವಸ್ಥೆ ಇಲ್ಲದೆ ಬೆಳೆಯುತ್ತಿವೆ. ನಮ್ಮ ದೇಶದ ಆಹಾರ ಸಾಮಗ್ರಿಗಳು  ಬೆಳೆಯಲಾಗದೆ ವಿದೇಶದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಲಿದೆ.
ದಿನೇ ದಿನೇ ಪ್ರಗತಿಯ ಹೆಸರಲ್ಲಿ ಮಾನವತೆಯನ್ನ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಒಂದು ಸಣ್ಣ ಸಮಾಜಸೇವೆ ಮಾಡಲು ಯತ್ನಿಸಿದರೂ ಅಲ್ಲಿ ಒಂದು ಕೊಂಕು ನುಡಿಗಳು, ಅಡೆತಡೆ ಬರುತ್ತಿವೆ. ಇದು ಮೇಲಿನ ಹಂತದಿಂದ ಕೆಳಮಟ್ಟದ ಹಂತದವರೆಗೂ ವಿಸ್ತರಿಸಿದೆ. ಇಲ್ಲಿ ಮೇಲು ಹಂತದ ವರ್ಗಕ್ಕೆ ಮಣೆ. ಆನಂತರ ಇನ್ನಿತರ ವರ್ಗಕ್ಕೆ.
===========================


ಆ ದಿನಗಳನ್ನ ನೆನಪು ಮಾಡಿಕೊಂಡರೆ ಇಂದಿಗೂ ಆ ಬೆಂಕಿ ಬಿಸಿಲು ನನ್ನ ಮೈ ಸುಡುತ್ತೆ.
ಬೆಂಗಳೂರಿನಿಂದ ಇನ್ನೇನು ಜೋಲಾರ ಪೇಟೆ  ಶುರು ಆಗೋ ಹೊತ್ತಿಗೆ  ಚೆನ್ನೈ ನ ಬಿಸಿಲ ಧಗೆ ಶುರು. ಅಂತು ಟ್ರೈನ್ ನಲ್ಲಿ ಸೀಟ್ ಹಿಡಿದು ಕುಳಿತು ಪ್ರಯಾಣಿಸುವುದೇ ದೊಡ್ಡ ಸಾಹಸ. ಇನ್ನು ಆ ಚೆನ್ನೈ Electric Oven ನೆ ಸರಿ. ಪಯಣ ಬಿಸಿಲ ಅನುಭವ 'ವಾನಂಬಾಡಿ' ಇಂದಲೇ ನಮ್ಮ 'body' ಗೆ ತಾಕುತ್ತೆ. ರೈಲು ಪಯಣ ಒಂದು ವಿಚಿತ್ರಾನುಭವ ತಂದಿತ್ತು ನನಗೆ. ಸಾಕಷ್ಟು ಬಸ್  ನಾಲ್ಲೇ ಪಯಣಿಸಿದ್ದ ನನಗೆ ಟ್ರೈನ್ ಅಂದ್ರೆ ಏನು ಅಂತ ತಿಳಿದ್ದದ್ದು ಚೆನ್ನೈಗೆ ಹೋದಾಗಲೇ. 
ಸೀಟ್ ಬುಕ್ ಮಾಡಿ , ಸೀಟ್ ಹಿಡಿಯುವುದರಿಂದ ಶುರುವಾಗಿ ಸ್ಟೇಷನ್ ನಲ್ಲಿ ಇಳಿಯುವವರೆಗೂ ವಿಚಿತ್ರ ವಿನೋದದ ಅನುಭವ. ಅಲ್ಲಿ ಬರುವ ಜನಗಳು, ಮಕ್ಕಳು, ಜೊತೆ ಸುಡು ಕಾಫ್ಫಿ , ಚಾಯ್, ಸುಡು ದೋಸೈ ಅನ್ನುತ್ತ ಮಾರುವ ಕ್ಯಾಂಟೀನ್ ಹುಡುಗರು, ಪತ್ತು ರೂಪಾಯಿಗೆ ಎರಡು ಅನ್ನುತ್ತ ತರುವ ಮಕ್ಕಳ ಗೊಂಬೆಗಳು, ಅಲ್ಲಿಯೇ ಬರುವ ಅಂಬುರು ಮಲ್ಲಿಗೆ ಮಹಿಳೆಯರು. ಕಿಟಕಿ ಪಕ್ಕದಲ್ಲಿ 'Cold ತಣ್ಣಿ' ಎಂದು  ಕೂಗುವವರು. ಬೇಕು ಅಂತಲೇ ಮೈ ತಾಕಿಸಿ ನಿಲ್ಲುವ ಜನಗಳು. ಅದರಿಂದಲೇ ಖುಷಿ ಪಡುವ ಮತ್ತೊಂದು ವರ್ಗದವರು. ಜಗಳ, ಮಕ್ಕಳ ಅಳು, ಕನ್ನಡ ಗೊತ್ತಿದ್ದೂ 'ಏನ್ ಮಚ್ಚ!!! ಎಂಗೆ ಪೋರೆ' ಎನ್ನುವ ಬೆಂಗಳೂರು ಕನ್ನಡಿಗರು(?)... ಚೆನ್ನೈ ಸ್ಟೇಷನ್ ಇಳಿಯುವವರೆಗೂ ಯಾವುದೊ ಲೋಕದಲ್ಲಿ ಇದ್ದ ಅನುಭವ.










========================================

ಸವಿ ಸವಿ ನೆನಪು ಸಾವಿರ ನೆನಪು ...
ಇಂದಿಗಿಂತ ಅಂದೇನೆ ಚೆಂದವೋ...
ಅನ್ನೋ ಹಾಡುಗಳು ಕೇಳುವಾಗ ಇಂದಿನಷ್ಟು ಅಂದು ಬದುಕಿನ ಜಂಜಾಟ, ಅವಸರ, ಆತುರ ಕಾತುರ ಇರಲಿಲ್ಲ. ನಿಧಾನ ಗತಿಯ ಒಳ್ಳೆ black & white ಚಿತ್ರಗಳಂತೆ ಇರುತ್ತಿತ್ತು. ಸುಮಾರು 13 ವರ್ಷಗಳು ಕಳೆದಿವೆ ನಾನು ಇಂಟರ್ನೆಟ್ ಜಗತ್ತಿಗೆ ಕಾಲಿಟ್ಟು. ಅಂದಿನಿಂದ ಇಂದಿನವರೆಗೂ ಹಲವು ಬದಲಾವಣೆಗಳು ಶೀಘ್ರಗತಿಯಲ್ಲಿ ಕಂಡಿದ್ದೇನೆ.
ನೆನಪಿರಬಹುದು ಅಂದಿನ ಆ ರೇಡಿಯೋ ಜಮಾನ....
'ಇದು ಆಕಾಶವಾಣಿ, ಬೆಂಗಳೂರು' ಎಂದು ಮಧುರವಾಗಿ ಉಳಿಯುವ ಧ್ವನಿ ಕೇಳಿದಾಗ ಆ ದೊಡ್ಡದಾದ ಡಬ್ಬದಂತೆ ರೇಡಿಯೋ ಮುಂದೆಯೇ ಅಡ್ಡಾಡುತ್ತಲೇ ಯಾವಾಗ ಚಲನಚಿತ್ರ ಗೀತೆಗಳು ಬರುತ್ತವೆಯೋ ಏನೋ ಎಂದು ಕಾತುರ.
ಹಿಂದಿನ ದಿನಗಳಲ್ಲಿ ನೋಡಿದ ಹೊಸ ಚಲನ ಚಿತ್ರ ಹಾಡು ಕೇಳುವಾಗ ರೇಡಿಯೋ ಧ್ವನಿ ಏರಿಸಿ ಓಣಿಯ ಸುತ್ತ ಮುತ್ತ ಜನರೆಲ್ಲಾ ಕೇಳುವಂತೆ ಮಾಡುವುದು. ವಿಶೇಷ ವಾರ್ತೆ ವಿಷಯಗಳು ಕೇಳುವಾಗ ಕಿವಿನಿಮಿರಿಸಿ ಕೇಳುತ್ತ ... ಅದರ ತರಂಗಾಂತರ ಕೆಟ್ಟು ಹೋದಾಗ ಕಂಗೆಡುವುದು. ಪಕ್ಕದಲ್ಲಿ ಯಾರೋ ಪಾಕೆಟ್ ರೇಡಿಯೋ ಕೇಳುವುದನ್ನ ನೋಡಿ ಬೇಜಾರು ಮಾಡಿಕೊಂಡು ರೇಡಿಯೋ ದ antenna ವನ್ನ ತಿರುಗಿಸಿ ಅಲ್ಲಾಡಿಸಿ ಸರಿಯಾಗಿ ಕೇಳುವ ಹೊತ್ತಿಗೆ ಅ ಕಾರ್ಯಕ್ರಮ ನಿಂತು ಹೋಗಿರುತಿತ್ತು.

'ಕಾಯೋ ತಂದೆಯೇ.. ದೇವ ಕರುಣಿಸೋ' ಎನ್ನುವಾಗ ಇದ್ದ ಭಕ್ತಿ ಭಾವದ ಮನಸು.
'ಗುಲಾಬಿ ಓ ಗುಲಾಬಿ..' ಎನ್ನುವಾಗ ಪ್ರೀತಿಯ ಅರಸುವ ಮನಸು.
ಇಂದಿನ FM Radio ಯುಗದ "ಹಳೆ ಪಾತ್ರೆ, ಹಳೆ ಕಬ್ಬಿಣ", "ಬೋರ್ಡ್ ಇರದ ಬಸ್ಸನು ಏರಿ ಬಂದ ಚೋಕರಿ" ಅನ್ನೋ ಫಾಸ್ಟ್ ಟ್ರಾಕ್ ಗೀತೆಗಳು, "ಇನ್ನು 1 hour ನನ್ನ ಜೊತೆ ಮಜಾ ಮಾಡಬಹುದು............... ಮುಂದಿನ songs ಜೊತೆ" ಅನ್ನೋ, ಅರ್ಥವಿರದ ಪ್ರಶ್ನೆಗಳ್ಳನ್ನ ಕೇಳಿ, ವಿಚಿತ್ರ ಉತ್ತರಗಳನ್ನ ಕೇಳಿ ಶೋತ್ರುಗಳನ್ನ ಆನಂದ ಪಡಿಸೋ, ಇನ್ನು "ಯಾರ ಬಳಿಯೂ ಹೇಳಿಕೊಳ್ಳದ ಮನಸ್ಸಿನ ಭಾವನೆಗಳನ್ನ ( ಸುಪ್ತ ಕಾಮನೆಗಳನ್ನ)" ಕೆದಕಿ ಕಾಡೋ ಇಂದಿನ ಯುಗದ
FM RJ ಗಳ ಭಾಷ ವೈಖರಿ ಕೇಳಿದರೆ ಅವರೇನು ಶಾಲೆಗೇ ಹೋಗಿ ಕನ್ನಡ ಕಲಿತ್ತಿದ್ದಾರ ? ಅನ್ನೋ ಶಂಕೆ ಕಾಡದೆ ಇರದು.
ಇದೆಲ್ಲ ಯಾಕೆ ಅಂದರೆ ನಾವು ಶಾಲೆಗೇ ಹೋಗುವ ಕಾಲ ರೇಡಿಯೋ ಜಮಾನ. ಏನೇ ವಿಷಯಗಳು ಬೇಕಿದ್ದರೂ ರೇಡಿಯೋ ಇಲ್ಲ ವೃತ್ತ ಪತ್ರಿಕೆಗಳು ಇರುತ್ತಿದ್ದವು. ಅಂದಿನ ಶಾಲೆ ಅಂದರೆ ಇಂದಿನಂತೆ ಡೊನೇಶನ್ ಕೀಳುವ ಸಂಸ್ಥೆಗಳಲ್ಲ ಉತ್ತಮ ವಿದ್ಯಾ ಪೀಠಿಕೆ, ಶಿಸ್ತು, ಕಲಿಕೆ ಹಾಕಿ ಕೊಡುತಿದ್ದ ವಿದ್ಯಾ ಕೇಂದ್ರಗಳು.
ಅಂದಿನ ದಿನಗಳಲ್ಲಿ  ಕಲಿಯುತ್ತಿದ್ದ ಪಾಠ, ಇತರ ಚಟುವಟಿಕೆಗಳು ಎಲ್ಲ ಕೃತಿಯಲ್ಲೇ. ಇಂದಿನಂತೆ ಕಂಪ್ಯೂಟರ್, downloads, pendrives, CD, ಅದೂ, ಇದೂ ಅಂತ ಇರಲೇ ಇಲ್ಲವಲ್ಲ. ಬರಿ ಮತ್ತೆ ಕಲಿ.
ಹಾ ! ನೆನಪಿದೆ ಸರಿಯಾಗಿ ಗುಂಡಗೆ ಬರೆಯುವುದಕ್ಕೆ 5 ಅಂಕಗಳು ಪ್ರತ್ಯೇಕ ಎಂಬ ವಿಶೇಷ ಸೂಚನೆ.
ಒಬ್ಬ ಗೆಳೆಯ ಇದ್ದ "ಪ್ರಭಾಕರ" ಅವನ ಅಕ್ಷರಗಳು ತುಂಬಾ ಗುಂಡಗೆ ಸ್ಪಷ್ಟ ವಾಗಿರುತ್ತಿದ್ದವು. ಅವನ ಅಕ್ಷರಗಳನ್ನ ನೋಡಿ ನಾನು ಅದೇ ರೀತಿ ಪ್ರಯತ್ನ ಪಟ್ಟು ಉತ್ತೀರ್ಣನಾದೆ.
ಆ ಪ್ರೈಮರಿ ಸ್ಕೂಲ್ ಮನೆಯ ಹತ್ತಿರ ಇತ್ತು. ಅಲ್ಲಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳೆಲ್ಲ ನಮ್ಮ ಆಸು ಪಾಸಿನ ಬೀದಿಯ, ಹುಡುಗರೇ ಆಗಿರುತ್ತಿದ್ದರು. ಈಗಿನಂತೆ ದೂರದ ಶಾಲೆಗಳಿಗೆ ಹೋಗಿ ಬರುವ ಪ್ರಮೇಯ ಇರುತ್ತಿರಲಿಲ್ಲ.
=====
ಆಹಾ..! ರಾತ್ರಿ ಮಲಗುವ ಮುನ್ನ ಮೊದಲೆಲ್ಲ ಕಥೆ ಕೇಳುವ ಅಭ್ಯಾಸ.
ಅಜ್ಜಿ, ಅಮ್ಮ, ಅತ್ತೆ, ಅಕ್ಕ, ಮಾವ, ದೊಡ್ಡಪ್ಪ ಇವರೆಲ್ಲರ ಕಥೆಗಳೇ ಒಂಥರಾ ರೋಚಕ ಅನುಭವದ ಕಥೆಗಳು (ಕೆಲವು ಕಥೆ ಸುಳ್ಳೋ ನಿಜವೋ ಇದುವರೆಗೂ ತಿಳಿದಿಲ್ಲ ).

ತಂದೆ ಹೇಳಿದ ಕಥೆಯಿದು. ಇದನ್ನ ಅವರ ತಂದೆ ಹೇಳ್ತಾ ಇದ್ದರಂತೆ.
' ನಮ್ಮ ತಾತ (ತಂದೆಯ ತಂದೆ) ಮತ್ತೆ ಮುತ್ತಾತ ಮೊದಲು ಇದ್ದದ್ದು ಬೆಂಗಳೂರು ಸಮೀಪದ ಕೇತಮಾರನಹಳ್ಳಿ ಹತ್ತಿರ ಆಗೆಲ್ಲ ತುಂಬಾ ಕಾಡು. ಕುರುಚಲು ಗುಡ್ಡ ಮೇಡು. ಅಲ್ಲಿ ಸುಮಾರು ಹತ್ತಿಪ್ಪತ್ತು ಮನೆಗಳಿದ್ದವಂತೆ. ಒಮ್ಮೆ ದೂರದ ಊರಿಗೆ ಇಬ್ಬರು ಬರುವಾಗ ಯಶವಂತಪುರ(ಹಳೆಯ ಹೆಸರು - ತುರುಕರ ಪಾಳ್ಯ) ದಾಟಿ ಅಲ್ಲಿ ಬಾಡು ಅಂದರೆ ಮಾಂಸವನ್ನ
ಮನೆಯ ಅಡುಗೆಗಾಗಿ ತರುವಾಗ ರಾತ್ರಿ ಸುಮಾರು 10 ಗಂಟೆ ಆಗಿತ್ತಂತೆ. ಇನ್ನೇನು ಈಗಿನ ಮಹಾಲಕ್ಷ್ಮಿ ಪುರದ ಗುಡ್ಡ ಹತ್ತಿ ಇಳಿವಾಗ ಹಿಂದಿನಿಂದ ಯಾರೋ ತಮ್ಮ ಮಾಂಸದ ಚೀಲವನ್ನ ಎಳೆದಂತಾಗಿ ಮುತ್ತಾತ '" ಲೇ, ಮಗನೆ ಈ ದೆವ್ವ ಮತ್ತೆ ಬಂದು ಕೆಳ್ತಾವ್ನೆ, ಬಿಸಾಕು ಒಂದೆರಡು ಚೂರು. ಹಾಳಾಗಿ ಹೋಗ್ಲಿ" ಎಂದರಂತೆ. ಅಂತೆಯೇ ತಾತ ಒಂದೆರಡು ಮಾಂಸ ಎಸೆದು ಮನೆಯ ಹಾದಿ ಹಿಡಿದರಂತೆ. ಮನೆಯಲ್ಲಿ ಅಜ್ಜಿ ಆಗ ಇವರಿಗಾಗಿ ಕಾಯುತ್ತ ಅಡುಗೆಗೆ ಸಿದ್ಧತೆ ಮಾಡುತ್ತಿದ್ದರಂತೆ.
ಆಗೆಲ್ಲ ವಿದ್ಯುತ್ ಎಲ್ಲಿ ಬರಬೇಕು. ಹೊಂಗೆ ಎಣ್ಣೆ ಮಿಣುಕು ದೀಪದ ಬೆಳಕಿನಲ್ಲಿ ಮನೆ ಬೆಳಗಬೇಕಾಗಿತ್ತು. ಹೀಗೊಮ್ಮೆ ಅದೇ ರೀತಿಯ ಬಾಡೂಟ ಸಿದ್ದತೆ ಮಾಡುವಾಗ, ತಾತನಿಗೆ ಕಳ್ಳು ಕುಡಿಯುವ ಹವ್ಯಾಸ. ಈಗಿನ ಮಲ್ಲೇಶ್ವರಂ ರೈಲ್ವೆ ನಿಲ್ದಾಣದ ಬಳಿ ಒಂದು ಕಳು ಮಾರಾಟ ಅಂಗಡಿ ಇತ್ತಂತೆ. ಅಲ್ಲಿಂದ ತಂದು ಮನೆಯ ಬಾಗಿಲ್ಲಲ್ಲಿ ಕುಳಿತು ಯಾವುದೋ ನಾಟಕದ ಹಾಡನ್ನು ಹೇಳುವಾಗ ಅಲ್ಲಿ ಬಾಗಿಲ ಮುಂದೆ ಎರಡು ಕಾಲಿನ ವಿಚಿತ್ರ ಪ್ರಾಣಿಯೊಂದು ನೃತ್ಯ ಮಾಡುತ್ತಿತ್ತಂತೆ. ಅದನ್ನು ಕಂಡ ತಾತ " ಬಂದೆನೋ ಮಗನೆ, ನಿಂಗೆ ಇವತ್ತು ಬೇಕಾ. ಕುಣಿ ಕೊಡ್ತೀನಿ" ಅಂತ ಹೇಳಿ ಯಾವುದೊ ಡಬ್ಬ ಹಿಡಿದು ಹಾಡುವಾಗ ಆ ಪ್ರಾಣಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತಂತೆ. ಇದರ ಕಾಟ ತಡೆಯಲಾರದೆ ಒಳಗೆ ಕುಳಿತ್ತಿದ್ದ ಅಜ್ಜಿಗೇ "ಲೇ, ಅಕ್ಕಮ್ಮ ಇದು ಬಂದೈತೆ, ಒಂದೆರಡು ಹಾಕು ಇತ್ತ.. ಹೋಗ್ಲಿ" ಅಂದರಂತೆ. ಮುತ್ತಜ್ಜಿ ತಂದು ಬಿಸಾಕುತ್ತಿದ್ದರಂತೆ. ಆ ಪ್ರಾಣಿ ಅದನ್ನ ತಿಂದು ಕೇಕೆ ಹಾಕುತ್ತ ಹೋಗುತ್ತಿತ್ತಂತೆ.

ಇದನ್ನೆಲ್ಲಾ ಕೇಳುವಾಗ ನಮ್ಮ ದೇಹವೆಲ್ಲ ಬೆವರುತ್ತಿತ್ತು. ಉಚ್ಚೆ ಉಯ್ಯದು ಕೊಳ್ಳೋದು ಬಾಕಿ. ರಾತ್ರಿ ಬಾಗಿಲು, ಕಿಟಕಿ ಸಂದು ನೋಡಲು ಭಯವಾಗಿ ಪಕ್ಕದಲ್ಲಿ ಮಲಗಿದ್ದ ಅಮ್ಮನನ್ನ ಗಟ್ಟಿಯಾಗಿ ಹಿಡಿದುಕೊಂಡು ಮಲಗುತ್ತಿದ್ದೆ.
ಹೀಗೆ ಹಲವು ಬೆಂಕಿದೆವ್ವ, ಗಾಳಿ ದೆವ್ವ , ನಾಳೆ ಬಾ ಅನ್ನೋ ಕೂಗುಮಾರಿ, ಕೊಳ್ಳಿದೆವ್ವಗಳ ಕಥೆ ಕೇಳುತ್ತ ರಾತ್ರಿ ಕಳೆಯುತ್ತಿದೆವು.