ಹಿಂದಿಮಯ ಕನ್ನಡ ಮಾಯ
ಇತ್ತೀಚೆಗೆ ನಾನು ಬೆಂಗಳೂರಿನ - (ಇನ್ನೂ ನಮ್ಮಲ್ಲಿ ಬ್ಯಾಂಗಲೋರ್) ಬಸ್ ಪಯಣ ಕೋರಮಂಗಲ ಕಡೆ ಹೊರಟಿದ್ದೆ. ಪಕ್ಕದಲ್ಲಿ ಒಬ್ಬನನ್ನ ನೋಡಿದಾಗಲೇ ನಾರ್ತ್ ಇಂಡಿಯಾದವನು ಅಂತ ತಿಳಿಯಿತು. ಏನೇನೋ ಮನ್ಸಲ್ಲಿಯೇ ಲೆಕ್ಕಾಚಾರ ಹಾಕುತ್ತಿದ್ದ, ಒಂದೆರಡು ಬಾರಿ ತನ್ನ ಫೈಲ್ ಅನ್ನು ತಿರುವಿ ಹಾಕಿದ, ಫೋನ್ ನಲ್ಲಿ "ಮೇರಾ ಜಾಬ್ ಹೋಜಯೇಗ ನಾ" ಎಂದು ಕೇಳಿದ, ಆಕಡೆಯಿಂದ ಏನು ಉತ್ತರ ಬಂದಿತೋ ಏನೋ ಅವನ ಮುಖದಲ್ಲೊಮ್ಮೆ ಸಂತಸ ಮೂಡಿತ್ತು.
ಕುತೂಹಲ ತಡೆಯದೆ "ಯಾವೂರು" ಅಂತ ಇಂಗ್ಲಿಷ್ ನಲ್ಲಿಯೇ ಕೇಳಿದೆ. ಅದಕ್ಕವನು "ನಂಗೆ ಅಷ್ಟು ಇಂಗ್ಲಿಷ್ ಬರಲ್ಲ, ಹಿಂದಿ ಯು ಪಿ ಇಂದ ಬಂದಿದ್ದೀನಿ, ಬಂದು ೬ ತಿಂಗಳಾಯ್ತು. ಎರಡನೇ ಜಾಬ್ ಗೆ ಟ್ರೈ ಮಾಡ್ತಾ ಇದ್ದೀನಿ" ಅಂದ ತನ್ನ ಹರುಕುಮುರುಕು ಹಿಂಗ್ಲಿಷ್ ನಲ್ಲಿ.
ನಾನು "ಎಲ್ಲಿ ಉಳಿದುಕೊಂಡಿರುವುದು" ಅಂತ ಕೇಳಿದೆ.
"ಕೋರ್ ಮಂಗ್ಲ" ಅಂದ.
ಸುಮ್ಮನೆ ಇರಲಾರದೆ ನನಗೂ ಹಿಂದಿ ಬರುತ್ತೆ ಅಂತ ತೋರಿಸಿಕೊಳ್ಳೋಕೆ "ಕನ್ನಡ ಆತ ಹೈ ಕ್ಯಾ" ಅಂದೆ.
"ನನಗೆ ಕನ್ನಡ ಬರಲ್ಲ, ಕಲಿಯಬೇಕೆಂದು ಅನಿಸಿಲ್ಲ, ನಮ್ಮ ಪಿ ಜಿ ನ ತೆಲುಗುನವರು ನಡೆಸ್ತಾರೆ, ಹತ್ತಿರ ಅಂಗಡಿಗಳು ಮಲಯಾಳಿಗರು ನಡೆಸ್ತಾರೆ, ಬಸ್ ನಲ್ಲಿ ಕಂಡಕ್ಟರ್ ಗೆ ಯು ಪಿ ಐ ತೋರಿಸಿ ಸ್ಟಾಪ್ ಹೇಳ್ತಿನಿ, ಗೂಗಲ್ ಮ್ಯಾಪ್ , ಬೋರ್ಡ್ಸ ಇಂಗ್ಲಿಷ್ನಲ್ಲಿದೆ, ಯು ಪಿ ಗೆಳೆಯ ನನಗೆ ಇಲ್ಲೇ ಜಾಬ್ ಕೊಡಿಸ್ತಾ ಇದ್ದಾನೆ, ಸಹೋದ್ಯೋಗಿಗಳೆಲ್ಲ ನಮ್ಮವರೇ, ಅದ್ದರಿಂದ ನನಗೆ ಕನ್ನಡ ಕಲಿಯಬೇಕೆಂದು ಅನಿಸಿಲ್ಲ,"
(ನಹಿ ಆತ, ಕನ್ನಡ್ ಸೀಖ್ನೆ ಕೆ ಲಿಯೇ ಜಾರೂರತ್ ನಹಿ, ಹಮಾರೆ ಪಿಜಿ ತೆಲುಗುವಾಲಾ ಚಲಾತ ಹಾಯ್, ಪಾಸ್ ಮೇ ಸಭಿ ದೂಕಾನ್ ವಾಲೆ ಮಲಯಾಳಿ, ಉನ್ ಲೋಗೋ ಕೋ ಹಿಂದಿ ಆತ ಹಾಯ್, ಬಸ್ ಮೇ ಕಂಡಕ್ಟರ್ ಕೋ ಯು ಪಿ ಐ ದಿಖಾಕೆ ಸ್ಟಾಪ್ ಬೋಲ್ತಾ ಹೂ, ಗೂಗಲ್ ಮ್ಯಾಪ್ ಮೇ ಇಂಗ್ಲಿಷ್ ಹೈ , ಬಾಹರ್ ಸಭಿ ಬೋರ್ಡ್ ಇಂಗ್ಲಿಷ್ ಹೈ. ಮೇರಾ ಯು ಪಿ ವಾಲಾ ಫ್ರೆಂಡ್ ಜಾಬ್ ದಿಲಾ ರಹ ಹೈ, ಸಭಿ ಕೊಲೀಗ್ ಹಾಮಾರಿ ಹಿ ಹಾಯ್, ಸೊ ಮುಜ್ ಕೋ ಕನ್ನಡ್ ಸೀಖ್ನಾ ಜರೂರತ್ ನಹಿ ಪಡ್ತಾ ಹೈ " ಅಂತ ವ್ಯಂಗನಾಗಿ ನಕ್ಕ. ನಾನು ಇಂಗು ತಿಂದ ಮಂಗನಂತೆ ಆದೆ.
ಬೆಂಗಳೂರಿನಲ್ಲಿ ಒಂದೆಡೆ ಪರಿಸರ ಮಾಲಿನ್ಯ - ವಾಯು, ನೀರು, ಶಬ್ದ ಮಾಲಿನ್ಯ ಆದರೆ ಇನ್ನೊಂದೆಡೆ ಭಾಷಾ ಮಾಲಿನ್ಯ, ಉದ್ಯೋಗ ಮಾಲಿನ್ಯ, ಅಂತರ್ಜಾಲ ಮಾಲಿನ್ಯ, ಎಲ್ಲವೂ ಮಾಲಿನ್ಯವೇ, ನಾವು ಅಂದುಕೊಂಡಂತೆ ಹಿಂದಿನ ಕನ್ನಡ ಭಾಷೆ, ಕನ್ನಡ ಜನವಿದ್ದ ಬೆಂಗಳೂರು ಕ್ಷಿಪ್ರದಲ್ಲಿ ಮಾಯಾವಾಗುತ್ತಿದೆ.
ಹಿಂದೊಮ್ಮೆ ಬೆಂಗಳೂರಲ್ಲಿ ತೆಲುಗು, ಮಲಯಾಳಿ ತಮಿಳಿಗರ ಪ್ರಾಬಲ್ಯವಿದೆಯೆನ್ನುವಾಗಲೇ ಘಜ್ನಿಯ ಧಾಳಿಯಂತೆ ಉತ್ತರ ಭಾರತದವರ ವಲಸೆ ಬೆಂಗಳೂರೇ ಏನು ಕರ್ನಾಟಕದ ಹಲವು ಮುಖ್ಯ ನಗರಗಳಲ್ಲಿ ಪ್ರಾಬಲ್ಯ ಮಿತಿಮೀರಿದೆ. ಹೀಗೆ ಮುಂದುವರೆದರೆ ನಮ್ಮ ಬೋರ್ಡ್ ಗಳು ಇಂಗ್ಲಿಷ್ ನ ಬದಲಾಗಿ ಹಿಂದಿಯೇ ಇರುತ್ತದೆ, ಕನ್ನಡ ಮೂರನೇ ಭಾಷೆಗೆ ತಳ್ಳಲ್ಪಡುತ್ತದೆ ಎಂಬ ಸಂಶಯ.
ಬೆಂಗಳೂರಿನಲ್ಲಿರುವ ಏರಿಯಾಗಳು ಮುಂದೆ ಜೋಯ್ ನಗರ್, ಕೋರ್ ಮಂಗ್ಲ್ , ಮಡಿವಾಲ್, ವಿಜೋಯ್ ನಗರ್, ಆಗರ, ಹೆಬ್ಬಲ್, ಎಲ್ ಹಂಕ .. ಹೀಗೆ ಬದಲಾಗುವುದರಲ್ಲಿ ಸಂಶಯವಿಲ್ಲ ಅಂತ ಅನಿಸುತ್ತಿದೆ.
ಕನ್ನಡದವರು ಬೇರೆಯವರಿಗಾಗಿ ತಮ್ಮ ಮೂಲ ನೆಲೆ, ಭಾಷೆ ಮತ್ತು ಸಂಸ್ಕೃತಿಯನ್ನ ಈ ಗತಿಯಲ್ಲಿ ಬಿಟ್ಟುಕೊಡುತ್ತಿರುವುದು ಖೇದನೀಯ.