Saturday, January 7, 2012

ಏಕ್ ಚಾದರ್ ಮೈಲೀ ಸೀ

ಏಕ್ ಚಾದರ್ ಮೈಲೀ ಸೀ
" ಮೇಡಂ ! ನಿಮ್ಮನ್ನ ನೋಡೋಕೆ ಯಾರೋ ಬಂದಿದ್ದಾರೆ" ಅಂತ ಮಂಜು ಬಂದು ಹೇಳಿದಾಗ ಬೆಚ್ಚಿ ಬಿದ್ದವಳಂತೆ ನಾಜಿಯ
"ಯಾರಂತೆ ?" ಅಂತ ಪ್ರಶ್ನೆ ಹಾಕಿದಳು. "ಗೊತ್ತಿಲ್ಲ ಮೇಡಂ, ವಿಸಿಟಿಂಗ್ ರೂಂ ನಲ್ಲಿ ಕುಳಿತಿದ್ದಾರೆ. ಚಂದ್ರಕಲಾ ಮೇಡಂ ನಿಮಗೆ ಬರೋದಿಕ್ಕೆ ಹೇಳಿದ್ದಾರೆ " ಅಂತ ಹೇಳಿ ಹೊರಟು ಹೋದ.
ಕ್ಲಾಸ್ ನಲ್ಲಿ ಮಕ್ಕಳಿಗೆ ಸುಮ್ಮನೆ ಇರುವುದಕ್ಕೆ ಹೇಳಿ ವಿಸಿಟಿಂಗ್ ರೂಂನತ್ತ  ಹೊರಟಳು. ಯಾರಿರಬಹುದು.. ಮೀರಾ, ಶಾರದಾ, ಸುಲ್ತಾನ .? ಎಂದು ಮನಸಲ್ಲೇ ಆತಂಕದಿಂದ  ವಿಸಿಟಿಂಗ್ ರೂಂನ ಬಾಗಿಲು ತಳ್ಳಿದಳು. ಕಿರ್ರ್ ಎಂದು ಬಾಗಿಲು ತಳ್ಳಿದ ಶಬ್ದಕ್ಕೆ ಅಲ್ಲಿ ಕುಳಿತಿದ್ದ ಪುರುಷ ವ್ಯಕ್ತಿ ಹಿಂತಿರುಗಿ ನೋಡಿದಾಗ ನಾಜಿಯಗೆ ಕೈ ಕಾಲುಗಳು ನಡುಗಿದವು. ಕಣ್ಣಲ್ಲಿ ನೀರು ತಾನಾಗೆ ತುಂಬಿ ಬಂತು. "ಆಪ್.. ಯಹಾ? " ಎಂದು ಅದರುವ ದನಿಯಲ್ಲಿ ಕೇಳಿದಳು.
"ಹಾ! ಬೇಗಂ ನಿನ್ನ ನೋಡಬೇಕು ಅಂತ ಅನಿಸ್ತು ಬಂದೆ." ಎಂದದ್ದು ನಾಜಿಯಳ ಪತಿ ಶಹಾಬುದ್ದೀನ್.
"ಯಾಕೆ ಅಲ್ಲೇ ನಿಂತುಬಿಟ್ಟೆ? ಬಾ ಬೇಗಂ ಇಲ್ಲಿ ಕೂತ್ಕೋ" ಅಂತ  ಆತನೇ ನಾಜಿಯಳನ್ನು ಕರೆದ. ಮೆಲ್ಲಗೆ ಅಡಿಯಿಡುತ್ತಾ ಸಮೀಪದಲ್ಲೇ ಇದ್ದ ಕುರ್ಚಿಯೊಂದರಲ್ಲಿ ಕುಳಿತು ಕೊಂಡು ಕಣ್ಣೀರು ಒರೆಸಿಕೊಂಡಳು.
"ಹೇಗಿದ್ದೀಯ ನಾಜಿಯ?" ಎಂದ.
"ಚೆನ್ನಾಗಿದ್ದೀನಿ" ಎಂದಳು ನಾಜಿಯ.
"ಎಷ್ಟು ದಿನ ಆಯ್ತು ನಿನ್ನ ನೋಡಿ? " ಎಂದ ಶಹಬ್
ದಿನಗಳಲ್ಲ, ತಿಂಗಳುಗಳಲ್ಲ ವರ್ಷಗಳೇ ಕಳೆದು ಹೋಗಿವೆ ಎಂದು ಹೇಳಬೇಕೆನಿಸಿತು ನಾಜಿಯಳಿಗೆ,
"ಸುಮಾರು ದಿನ ಆಯ್ತು. ನೀವು ಹೇಗಿದ್ದೀರಿ? ನಿಖಾ ಆಯ್ತಾ?" ಎಂದಳು.
"ಹೋಗಯ ಬೇಗಂ, 3 ವರ್ಷ ಆಯ್ತು. ಬೇಟಿಯು ಇದ್ದಾಳೆ " ಎಂದ.
"ಸರಿ" ಎಂದು ಹೇಳುವಾಗಲೇ ಮಂಜು ಎರಡು ಟೀ ಕಪ್ ತಂದಿಟ್ಟು ಹೋದ.
ಟೀ ಅನ್ನು ಶಹಬ್ ನೀಡುತ್ತ "ಅಮ್ಮಿ, ಅಬ್ಬಜಾನ್, ಮುನ್ನಿ ಹೇಗಿದ್ದಾರೆ?" ಎಂದು ಕೇಳಿದಳು.
"ಎಲ್ಲರು ಚೆನ್ನಾಗಿದ್ದಾರೆ. ನೀನು ಇಲ್ಲಿಗೆ ಬಂದು ಎಷ್ಟು ದಿನ ಆಯ್ತು. ನನಗೆ ನಿನ್ನೆಯೇ ಗೊತ್ತಾಗಿದ್ದು  ಅದೂ ಗೋಕುಲಂ ನಲ್ಲಿ ನಿನ್ನ ಸಹೇಲಿ ಮೀರಾ ಸಿಕ್ಕಿ ಹೇಳಿದಳು" ಎಂದ.
ಓರೆಗಣ್ಣಿನಿಂದ ಅವನ್ನು ನೋಡುತ್ತಾ, "ಸುಮಾರು ದಿನ ಆಯ್ತು ಶಹಬ್ "
"ಹಾಗಿದ್ರೆ ಇಷ್ಟು ದಿನ ? "
"ನನಗೆ ಕ್ಲಾಸ್ ಗೆ ತಡ ಆಗುತ್ತೆ. ಮಕ್ಕಳು ಗಲಾಟೆ ಮಾಡ್ತಾ ಇರುತ್ತವೆ" ಎಂದು ಅವನ  ಮಾತನ್ನು ಅಲ್ಲೇ ತುಂಡರಿಸುವಂತೆ  ಹೇಳಿ ಎದ್ದು ನಿಂತಳು ನಾಜಿಯ.
"ಸರಿ ಬೇಗಂ, ನಾಳೆ ಸಂಜೆ ಭೇಟಿ ಆಗುವಾ. ಖುದಾ ಆಫಿಜ್ " ಎಂದು ಹೇಳಿ ಹೊರಟು ಹೋದ.
ಇತ್ತ ನಾಜಿಯ ದ್ವಂಧ್ವ ಮನಸಿಲ್ಲಿಯೇ ತನ್ನ ತರಗತಿಯನ್ನು ಅಂದು ಮುಗಿಸಿ ಆ ಶಾಲೆಯ ಹಿಂಬದಿಯಲ್ಲಿ ಇದ್ದ ತನ್ನ ಹಾಸ್ಟೆಲ್ ಗೆ ಹಿಂತಿರುಗಿದಳು. ಸಂಜೆ ಮೀರಾಗೆ ಫೋನ್ ಮಾಡಲು ಯತ್ನಿಸಿದಳು ಆದರೆ ಆಕೆ ಸಿಗಲಿಲ್ಲ.
ಊಟ ಮಾಡಲು ಮನಸಿಲ್ಲದೇ ಜೂಸ್ ಕುಡಿದು ತನ್ನ ರೂಂ ನಲ್ಲಿ ಓದಲೆತ್ನಿಸಿದಳು. ಆದರೆ ಆಕೆಗೆ ಶಹಾಬುದ್ದೀನ್ ಕಣ್ಣು ಮುಂದೆ ಬರುತ್ತಿದ್ದ. ಹಾಗೆಯೇ 6 ವರ್ಷ ಹಿಂದಿನ ದಿನಗಳು ನೆನಪಾದವು. ದುಃಖ ಉಮ್ಮಳಿಸಿ ಬಂತು. ತನ್ನ ಅಬ್ಬ, ಅಮ್ಮಿ ಎಲ್ಲರನ್ನು ನೆನಸಿಕೊಂಡಳು.
 - - - -

ಅಂದಿನ ಕಾಲೇಜು ದಿನಗಳಲ್ಲಿ ಹೃದಯ ಕದ್ದವನು ಸಹಪಾಟಿ ರಫೀಕ್. ನೋಡಲು ಎಷ್ಟು ಚೆಂದವೋ ಅಷ್ಟೇ ಅವನ ಮಾತು, ಓದು, ಇನ್ನಿತರ ಕಾಲೇಜು ಸಂಭ್ರಮಗಳಲ್ಲಿ ಅವನದೇ ಕಾರುಬಾರು. ಅವನ ಹಿಂದೆ ಹಲವು ಹುಡುಗ ಹುಡುಗಿಯರ ಹಿಂಡು. ಆದರೆ ಅವನ ಕಣ್ಣು ನಾಜಿಯ ಮೇಲೆ.
ನಾಜಿಯ ಸುಸ್ವರ ಕಂಠದ ಗಾಯಕಿ. ಅವಳ ಘಜಲ್ ಗಳಿಗೆ ಮಾರುಹೊದವರೇ ಇಲ್ಲ. ತರಗತಿಯ ಬಿಡುವಿನ ವೇಳೆಯಲ್ಲಿ, ಕ್ಯಾಂಟೀನ್ ನಲ್ಲಿ, ಕಾಲೇಜು ಬಸ್ ನಲ್ಲಿ, ಟೂರ್ ಹೋದರೆ ಅಲ್ಲಿ, ಅವಳ ಪ್ರೇಮ ಕಾವ್ಯ ಕೇಳಿ ಖುಷಿ ಪಟ್ಟವರು, ವಿರಹದ ಘಜಲ್ ಕೇಳಿ ಅತ್ತವರು ಎಷ್ಟು ವಿದ್ಯಾರ್ಥಿಗಳೋ.
ನಾಜಿಯ ತಂದೆಯಂತೂ ಅವಳ ಭಕ್ತಿ ಗೀತೆ ಕೇಳದೆ ಬೆಳಿಗಿನ ಚಹಾ ಕುಡಿಯುತ್ತಿರಲಿಲ್ಲ. ಆಕೆ ಮಲಗಿದ್ದರೂ ಎಬ್ಬಿಸಿ
" ಬೇಟಿ, ಏಕ ಖುದ ಕ ಘಜಲ್  ಸುನಾವೋ " ಎಂದು ಕೇಳುವರು.
" ಅಬ್ಬ ಮೀರಾ ಕ ಗೀತ್ ? "
"ಖುದಾ ಏಕ್  ಹೈ, ಕೊಯಿ ಭೀ ಸುನಾವೋ" ಎಂದು ಚಹಾ ಹಿಡಿದು ಅವಳ ಮುಂದೆ ಕುಳಿತುಕೊಳ್ಳುವರು.
"ಮೀರಾ ಕೆ ಪ್ರಭು ಗಿರಿಧರ್ ನಾಗರ್ ಚರಣ್ ಕಮಲ್ ಕಿ ದಾಸಿ ರೇ ..." ಎಂದು ರಾಗ ಎತ್ತಿದರೆ ಸಾಕು ಮನೆಯಲ್ಲಿ ಸ್ವಯಂ ಮೀರಾ ನೆ ಹಾಡುತ್ತಿದ್ದಳೆನೋ ಎನ್ನುವಂತೆ ಇತ್ತು. ಪ್ರತಿದಿನ ಬೆಳಿಗ್ಗೆ ಇದೆ ಅಭ್ಯಾಸವಾಗಿತ್ತು.

"ನಾಜಿಯ ಇವತ್ತು ನಿನ್ನ ಮೀರಾ ಭಜನ್ ನನ್ನ ಮನೆಯವರೆಗೂ ಕೇಳುತಿತ್ತು. ವಾಹ್ !! ಸುಭಾನ್ ಅಲ್ಲಾ !" ಎಂದು ರಫೀ ಕಾಲೇಜ್  ನಲ್ಲಿ ಹೇಳಿದಾಗ ನಾಜಿಯ ಮನಸಲ್ಲಿ ಏನೋ ಪುಳಕ.
ಆದರೆ ಕಾಲೇಜಿನಲ್ಲಿ ಎಲ್ಲರಿಗೂ ಬರಿಯ ನಾಜಿಯಳ ಪ್ರೇಮಗೀತೆಗಳೇ ಬೇಕಾಗಿತ್ತು . ಅಂದಿನ ದಿನಗಳೇ ಅಂತವು. ಯೌವ್ವನದ ಉತ್ಸಾಹದ ದಿನಗಳು. ಕಣ್ಣಲ್ಲೇ ಸಂಭಾಷಿಸುವ ದಿನಗಳು.
ನಾಜಿಯ,  ರಫೀಕರ ಸ್ನೇಹ ಪ್ರೇಮವಾಗಿ ಅರಳಿತ್ತು. ಅದಕ್ಕೆ ಸಹಾಯವಾಗಿ ನಿಂತವನು ಶಬುದ್ದೀನ್, ನಾಜಿಯಳ ಸಂಬಂಧಿ. ಎಲ್ಲವೂ  ಸುಂದರ ಲೋಕ ಆ ದಿನಗಳು.. ಪ್ರತಿದಿನ ರಫೀ ಯನ್ನು ನೋಡದೆ, ಮಾತಾಡಿಸದೇ ಇರಲು ಆಗುತ್ತಿರಲಿಲ್ಲ ನಾಜಿಯಗೆ.
ಅದರ ಕುರುಹು ಕಾಲೇಜ್ ನಲ್ಲಿ ಆಕೆಯ ಪ್ರೇಮಗೀತೆಯಿಂದ ಕಾಣುತಿತ್ತು.
ಇತ್ತೀಚಿಗೆ ನಾಜಿಯ ಸಂಜೆ ಮನೆಗೆ ಬರುವುದು ತಡವಾದಗೆಲ್ಲ ಅವಳ ಅಮ್ಮಿ,
"ಎಲ್ಲಿಗೆ ಹೋಗಿದ್ದೆ, ಇಷ್ಟು ಹೊತ್ತು ಏನಾದ್ರೂ ಮಾಡ್ಕೊಂಡು ಬಂದ್ರೆ ನಿನ್ನ ಸಾಯಿಸಿ ಬಿಡ್ತೀನಿ" ಎಂದು ಎಚ್ಚರ ಕೊಡ್ತಿದ್ದರು.
ಅದಕ್ಕೆ ಅವಳ ತಂದೆ " ಚೋಡೋ  ಜೀ, ಬೇಟಿ ದೊಡ್ಡವಳು ಆಗಿದ್ದಾಳೆ. ಅವಳಿಗೂ ಗೊತ್ತು ಏನು ಬೇಕು ಏನು ಬೇಡ ಅಂತ" ಎಂದು ಮಗಳನ್ನು ಸಂಭಾಳಿಸುತ್ತಿದ್ದರು.
- - - -
ಹೀಗೆ ಒಮ್ಮೆ ನಾಜಿಯ ಕಾಲೇಜು ಸಹಪಾಟಿ ಉಮ್ರಾವ್ ಳ  ಮದುವೆಗೆ ಮೈಸೂರಿಗೆ ಹೋಗಬೇಕಾಗಿ ಬಂತು. ಎರಡು ದಿನ ಅವಳ ತರಗತಿಯ ಸ್ನೇಹಿತ-ಸ್ನೇಹಿತೆಯರೆಲ್ಲ ಒಟ್ಟಾಗಿ ಹೋಗುವ ಎಂದು ಹೊರಟರು.
ನಾಜಿಯ ಬರಲು ಹಿಂದೇಟು ಹಾಕಿದಾಗ
" ನನಗಾಗಿ ಆದರು ಬರಬೇಕು. ಇಲ್ಲವಾದಲ್ಲಿ ನಮ್ಮ ಸ್ನೇಹ ಇಲ್ಲಿಗೆ ನಿಲ್ಲುತ್ತೆ." ಎಂದ ರಫೀಕ್.
"ಅಲ್ಲಾಹ್ ! ಹಾಗೆಲ್ಲ ಅನ್ನಬೇಡಿ ರಫೀ. ಮನೆಯಲ್ಲಿ 'ಅಬ್ಬ' ಇಲ್ಲ, ಭಾಯಿ  ಭಿ ಇಲ್ಲ. ಅಮ್ಮಿ, ಪರ್ವೀನ್ ಇಬ್ಬರೇ ಇದ್ದಾರೆ. ಬರೋದಿಕ್ಕೆ ಆಗೋಲ್ಲ"
"ಪ್ಲೀಸ್!! ನಾಜು, ನಾವಿಬ್ಬರು ಅಲ್ಲಿ ಏಕಾಂತದಲ್ಲಿ ಸುಂದರ ಪರಿಸರದಲ್ಲಿ ನಮ್ಮ ಭಾವನೆಗಳನ್ನ ಹಂಚಿಕೊಳ್ಳಬಹುದು. ಬಾ, ಬರಲೇ ಬೇಕು. ಇಲ್ಲಾ, ನಾನೇ ಬಂದು ಅಮ್ಮಿಯನ್ನ ಒಪ್ಪಿಸಲಾ?" ಎಂದ ರಫೀಕ್.
"ಬೇಡ, ರಫೀ, ಈಗಲೇ ಅಮ್ಮಿಜಾನ್ ನನ್ನ ಬಗ್ಗೆ ಸಂದೇಹ ಪಟ್ಟಿದ್ದಾರೆ. ನೀ ಬಂದರೆ ಅಂತು ಅದು ಗಟ್ಟಿಯಾಗುತ್ತೆ . "
"ಸರಿ, ನಿನ್ನ ಸಹೇಲಿ  ಮೀರಾಳ ಸಹಾಯ ತಗೋ. ನನಗಾಗಿ ನೀನು ಬರಲೇ ಬೇಕು. ಹೇಳಿದ್ದು ನೆನಪಿದೆಯಲ್ಲಾ?" ಎಂದ. 
"ಸರಿ" ಎಂದು ಮೀರಾಳನ್ನು ಮನೆಗೆ ಕರಕೊಂಡು ಹೋದಳು. ಅದು ಯಶಸ್ಸು ಆಯಿತು. ಉಮ್ರಾವ್ ಮದುವೆಗೆ ಸುಮಾರು 7-8 ಜನ ಹೋದರು.
ಉಮ್ರಾವ್ ಮನೆಯಂತೂ ತುಂಬ ದೊಡ್ಡಮನೆ. ಮದುವೆಯ ಸಂಭ್ರಮ, ಮೆಹಂದಿ, ಧೋಲಕ್ ಗೀತೆ ಯೊಂದಿಗೆ, ನಾಜಿಯಳ ಘಜಲ್ ಗಳು ಅಲ್ಲಿಗೆ ಬಂದವರ ಮನ ಸೂರೆಗೊಂಡವು. ಮದುವೆಯ ದಿನ ಏನೇನೋ ಸಂಪ್ರದಾಯಗಳು ನಾಜಿಯಗೆ ಹೊಸದೆನಿಸಿತು.
ಮದುವೆಗೆ ಗಂಡು-ಹೆಣ್ಣು "ಕುಬೂಲ್ ಹೈ " ಎಂದು ಹೇಳಿದಾಗ ಅಲ್ಲಿನ ಸಂಭ್ರಮ ನಾಜಿಯ ಮನಸಿಗೆ ತಟ್ಟಿತು.
ಅದರಂತೆ ಆ ಸಂಜೆ
"ನೀನು ನಮ್ಮ ಮನೆಗೆ ಬಂದು ನೀ ಹೀಗೆ ಬಂದು ಕೇಳಬೇಕು ರಫೀ " ಎಂದಳು ನಾಜಿಯ.
"ಅಬ್ಭೀ, ಬಾರಲೇನು? ನಾನಂತೂ ಸಿದ್ಧ. ನೀನೆ ಇನ್ನು ಕೆಲಸ ಸೇರ ಬೇಕು ಅದು ಇದು ಅಂತ ಕಾಲ ತಳ್ಳುತ್ತಾ  ಇರೋದು." ಎಂದು ಕೀಟಲೆ ಮಾಡಿದ ರಫೀ.
"ಹಾಗಲ್ಲ ರಫೀ, ಅಬ್ಬಜಾನ್ ಗೆ ಮೈ ಹುಷಾರಿಲ್ಲ. ಸ್ವಲ್ಪ ದಿನ ಆಪರೇಷನ್ ಮುಗಿದರೆ ಸರಿ ಹೋಗುತ್ತೆ"
"ಅಲ್ಲಿವರೆಗೂ ಕಾಯಬೇಕ?"
"ಹಾ ಜೀ" ಎಂದು ನಕ್ಕಳು.

ಸಂಜೆ ಎಲ್ಲರು ತಮ್ಮ ಮನೆಗಳಿಗೆ ಹಿಂದಿರುಗಲು ಸಿದ್ಧತೆ ಮಾಡಿದರು. ಇತ್ತ ರಫೀಕ್ ನಾಜಿಯಳನ್ನು ಕರಕೊಂಡು ಮೈಸೂರ ಹೊರಗಿನ ಪ್ರಸಿದ್ಧ ಹೋಟೆಲ್ ಒಂದರಲ್ಲಿ ರಾತ್ರಿ ಊಟದ ಏರ್ಪಾಡು ಮಾಡಿದ್ದ. ಅಲ್ಲಿಗೆ ವಿಶೇಷ ಅತಿಥಿಗಳಾಗಿ ರಾಜಕಾರಣಿಗಳು ಬಂದಿದ್ದರಿಂದ ರಾತ್ರಿಯ ಊಟದ ವ್ಯವಸ್ಥೆ ತುಂಬಾ ತಡವಾಯಿತು.
"ರಫೀ, ತಡ ಆಯಿತು, ಹೋಗೋಣವೆ. ಊಟ ಏನು ಬೇಡ ಉಮ್ರಾವ್ ಮನೆಯಲ್ಲಿ ರೋಟಿ ಮಾಡಿಸಿ ತಿಂದರಾಯ್ತು" ಎನ್ನಲು ನಾಜಿಯ,
"ಸ್ವಲ್ಪ ವೇಳೆ ನಾಜು, ಮುಗಿಯುತ್ತೆ ಅಂತ ಹೇಳಿದ್ದರಲ್ಲಾ" ಎಂದ ರಫೀಕ್.
ಊಟಕ್ಕೆ ಕಾಯುತ್ತಲೇ ಇದ್ದರು, ಸುಮಾರು 11 ಗಂಟೆಗೆ ಅತಿಥಿಗಳ ಕಾರ್ಯಕ್ರಮ ಮುಗಿಯಿತು.
ಅಲ್ಲಿನ  ವ್ಯವಸ್ಥಾಪಕ " ಕ್ಷಮಿಸಿ, ತಡವಾಗಿದ್ದಕ್ಕೆ" ಎಂದು ಅವರ ಹಾಗು ಅಲ್ಲಿಗೆ ಆಗಮಿಸಿದ ಇನ್ನಿತರ ಜನರಿಗೆ ಊಟದ ವ್ಯವಸ್ಥೆ ಮಾಡಿಸಿದರು.
ಹಲವು ಜನ ಅಲ್ಲಿನ ವ್ಯವಸ್ಥೆಯನ್ನು ಬೈದುಕೊಂಡು ಹಾಗೆ ಹೊರಟು ಹೋದರು. ಕೆಲವರು ದೂರದ ಊರಿಂದ ಬಂದಿದ್ದರಿಂದ  ವಿಧಿಯಿಲ್ಲದೆ ಅಲ್ಲೇ ಊಟ ಮುಗಿಸಿದರು ಹಾಗೆ ತಮ್ಮ ಹಾದಿ ಹಿಡಿದರು.
ನಾಜಿಯ, ರಫೀಕ್ ತಮ್ಮ ಊರಿಗೆ ಹೊರಡಲಾಗದೆ ಅಲ್ಲೇ ಉಳಿದುಕೊಂಡರು.
ನಾಜಿಯ ಬೇಡವೆಂದರೂ , "ಹೇಗೂ, ನಮ್ಮ ನಿಕಾಃ  ಖಂಡಿತ, ಒಂದಾಗೋಣ" ಎಂದ ರಫೀಕ್.
ಅಲ್ಲೇ ಅವರು ತಮ್ಮ ಮೈ ಮನ ಹಂಚಿಕೊಂಡರು.
ಬೆಳಿಗ್ಗೆ "ಕ್ಷಮಿಸು ನಾಜಿಯ, ತಪ್ಪಾಯ್ತು, ಜಲ್ದಿ, ನಿಮ್ಮನೆಗೆ ಬರ್ತೀನಿ" ಅಂದು ನಾಜಿಯಳನ್ನು  ಸಮಾಧಾನ ಪಡಿಸಿ ತಮ್ಮ ಊರಿಗೆ ಹಿಂದಿರುಗಿದರು. ಮುದುಡಿದ ಮನಸಲ್ಲೇ ನಾಜಿಯ, ರಫಿಯನ್ನು ಹಲವು ಬಾರಿ "ನನ್ನ ಕೈ ಬಿಡಬೇಡ ರಫಿ, ನಾನಿರೋದೆ ನಿನಗಾಗಿ" ಹೇಳುತ್ತಿದಳು. ಹಾಗೆಯೇ ಅವನೂ ಸಹ ನಮ್ಮ ಸುಂದರ ಕ್ಷಣಗಳನ್ನ ನೆನಸಿಕೊ ಎಂದು, ಸಮಾಧಾನ ಪಡಿಸುತ್ತಿದ್ದ.
----
ಆ ವಾರದಲ್ಲೇ ಸ್ನೇಹಿತೆ ನಜ್ಮ "ಸುನಾ ಕ್ಯಾ, ಉಮ್ರಾವ್ ನಿಕಾಃ  ಮುರಿದುಬಿತ್ತು". ಎಂದಳು ನಾಜಿಯ ಬಳಿ .
"ಯಾಕೆ, ಕ್ಯಾ ಹುಆ"
"ಅವಳ ಪಹಲಿ ರಾತ್ ಕಿ ಚಾದರ್ ಮೇಲೆ ಖೂನ್ ಬಿದ್ದಿರಲಿಲ್ಲವಂತೆ. ಅದಕ್ಕೆ, ನಿನ್ನೆ ತಲಾಖ್ ಆಯ್ತು" ಎಂದಳು ನಜ್ಮ.
"ಹಾಗೆಲ್ಲ ಸಂಪ್ರದಾಯ ಹೀಗೂ ಇದೆಯಾ?"
"ಏನು, ಮಾಡೋದು ನಾಜು. ಇದೊಂದು ಕೆಟ್ಟ ಸಂಪ್ರದಾಯ ನಮ್ಮಲ್ಲಿ ಇನ್ನು ಉಳಿದಿದೆ. ಮೊದಲಿನಂತೆ ಹೆಣ್ಣು ಮನೆಯಲ್ಲೇ ಉಳಿದ ವಸ್ತುವಾಗಿಲ್ಲ. ಹೊರಗೆ ಹೋಗಿ ಬರ್ತಾಳೆ. ಅವಳಲ್ಲೂ ಹಲವು ದೈಹಿಕ ಬದಲಾವಣೆ ಕಂಡುಬರುತ್ತೆ. ಅವಳು ಎಷ್ಟೇ ಪವಿತ್ರ ಆಗಿದ್ದರು ಈ ಒಂದು ಪಹಲಿ ರಾತ್ ಕ ಚಾದರ್ ನೋಡುವ ಸಂಪ್ರದಾಯದಿಂದ ಅವಳ ಬಾಳು ನರಕ" ಎಂದು  ನಾಜಿಯಳ  ಮನದಲ್ಲಿ ವಿಷದ ಬೀಜ ಬಿತ್ತಿ ಹೋದಳು ನಜ್ಮ.
ನಾಜಿಯ ಮೈಯಲ್ಲಿ ಕೆಲ ಬದಲಾವಣೆ  ಕಂಡು ಬಂದಿತು. ತಾನು ಗರ್ಭಿಣಿ ಏನೋ ಆತಂಕ ಕಾಡುತಿತ್ತು. ಇತ್ತ ರಫೀಕ್ ಸಹ ಸಿಗುತ್ತಿರಲಿಲ್ಲ. ತನ್ನಲ್ಲಿ ಆಗುತ್ತಿರುವ ಬದಲಾವಣೆ ಹೇಳಿಕೊಳ್ಳಬೇಕು ಎಂದು ಭೇಟಿಯಾದರೆ,
 "ಪರೀಕ್ಷೆ ಸಮಯ ನಾಜು, ನಿನಗೂ ಗೊತ್ತಲ್ಲವ ಕೆಲಸಕ್ಕೆ ಎಷ್ಟು ತೊಂದರೆ ಅಂತ. ಚೆನ್ನಾಗಿ ಓದಿದರೆ ಒಳ್ಳೆ ನೌಕರಿ ಸಿಗುತ್ತೆ." ನೌಕರಿ ಸಿಕ್ಕ ತಕ್ಷಣ ನಮ್ಮ ನಿಕಾಃ " ಎಂದ ರಫೀಕ್.
 ತಾನು ಗರ್ಭಿಣಿ ಎಂದು ತಿಳಿದು ಹೋಗಿತ್ತು. ಧೈರ್ಯದಿಂದ ಮೀರಾಳ ಬಳಿ ಹೇಳಿದಳು. ಮೀರಾ ಆತಂಕದಿಂದ ಸಮಸ್ಯೆ ಬಗೆ ಹರಿಸಲು ಹೇಳಿದಳು. ಆಗ ಕಂಡಿದ್ದು ಶಹಬ್. ಅವನ ಬಳಿ ಇಬ್ಬರೂ ಹೋಗಿ ಸಮಸ್ಯೆ ಹೇಳಿದರು.
ಅವನು ಕನಿಕರದಿಂದ ರಫೀಕ್ ನ ಕೇಳಿದ ಆದರೆ ಆ ಹೊತ್ತಿಗಾಗಲೇ ರಫಿ ದುಬೈ ಗೆ ಹಾರಿದ್ದ.
ಇತ್ತ ನಾಜಿಯ ತನ್ನ ಒಂದು ಕ್ಷಣದ ತಪ್ಪಿಗೆ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಳು. ಶಹಬ್ ಹಾಗು ಮೀರಾ,  ನಾಜಿಯಳ ಮನವೊಲಿಸಿ ಭ್ರೂಣ ತೆಗೆಸಲು ನಿರ್ಧರಿಸಿದರು.
ನಾಜಿಯ ತಂದೆಗೆ ಹೃದಯ ಶಸ್ತ್ರ ಚಿಕಿತ್ಸೆ ಅದೇ ಸಮಯದಲ್ಲಿ ಆಗಿತ್ತು. ಎಲ್ಲರೂ ಅತ್ತಕಡೆ ಗಮನ ಹರಿಸಿದ್ದರಿಂದ ನಾಜಿಯ ಬಗ್ಗೆ ಅಷ್ಟೊಂದು ಗಮನ ಹರಿಸಲಿಲ್ಲ.
ಆದರೆ ಮುಂದೆ ತನ್ನನ್ನು ಯಾರು ಮದುವೆ  ಆಗ್ತಾರೆ, ಅಮ್ಮಿ-ಅಬ್ಬನ ಖಾಂದನ್  ಮರ್ಯಾದೆ ಹಾಳಾಗಿ ಹೋಗುತ್ತೆ.
ನಾ ತಪ್ಪು ಮಾಡಿಬಿಟ್ಟೆ ಅಂದು ಮತ್ತೊಮ್ಮೆ ಆತ್ಮಹತ್ಯೆ ಗೆ ಪ್ರಯತ್ನಿಸಿದಳು.
ಆಗ ಅವಳ ನೆರವಿಗೆ ಬಂದದ್ದು ಶಹಬ್.
"ಹೇಗೂ ನಾವು ಸಂಬಂಧಿಕರು, ನಾವು ನಿಕಾಃ ಮಾಡಿಕೊಳ್ಳೋಣ. ಆಗಿದ್ದೆಲ್ಲ ಕೆಟ್ಟ ಕನಸೆಂದು ಮರೆಯಬೇಕು ನಾಜಿಯ. ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತಿನಿ. ಯೋಚನೆ ಬೇಡ. ಮುಂದಿನ ದಾರಿ ನೋಡಿಕೊಳ್ಳುವ. ಅವನು ನಿನ್ನ ಮರೆತು ಸುಖವಾಗಿ ಇದ್ದಾನೆ. ನೀನು ಅವನ ನೆನಪಲ್ಲಿ ಸಾಯಲು ಸಿದ್ಧವಾಗಿದ್ದಿಯ. ನನ್ನ ಮೇಲೆ ನಂಬಿಕೆ ಇಟ್ಟು  ಈ ನಿಕಾಃ  ಒಪ್ಪಿಕೊ. ಸಮಯ ತಗೋ " ಎಂದು ಧೈರ್ಯ ಹೇಳಿ ಹೋದ ಶಹಾಬುದ್ದೀನ್.
"ಆಯ್ತು" ಎಂದು ಮೀರಾ ಸಲಹೆ ಕೇಳಿ 2-3 ತಿಂಗಳ ನಂತರ ಶಹಬ್ ನ ಮಾಡುವೆ ಮಾಡಿಕೊಳ್ಳಲು ನಿರ್ಧರಿಸಿದಳು ನಾಜಿಯ.
ಶಹಬ್ ನ ಮನೆ ಮನೆತನ ದೊಡ್ಡದು. ಇಬ್ಬರು ಅಕ್ಕಂದಿರು, ಇಬ್ಬರು ಅತ್ತಿಗೆಗಳು, ತಂಗಿ, ತಮ್ಮ, ಅಬ್ಬ-ಅಮ್ಮಿ ಎಲ್ಲರು ಒಟ್ಟಿಗೆ ವಾಸ ಮಾಡುತ್ತಿದ್ದರು. ಅಲ್ಲಿನ ಬಾಳು ಕಷ್ಟ ಎಂದು ತಿಳಿದಿದ್ದರೂ, ಶಹಬ್ ನ ಮೇಲಿನ ನಂಬಿಕೆಯಿಂದ  ಆ ಮನೆಗೆ ಸೊಸೆಯಾಗಿ ಬಂದಳು. ಮದುವೆಯ ಮೊದಲ ರಾತ್ರಿ ಶಹಬ್ ನಾಜಿಯ ಒಂದಾದರು. ನಾಜಿಯ ಅವನ ಪ್ರೀತಿ, ವಿಶ್ವಾಸಕ್ಕೆ ಸೋತುಹೋದಳು.
ಬೆಳಿಗ್ಗೆ ಶಹಬ್ ಹೊರಗೆ ಹೋಗಲು, ನಾಜಿಯ ಸ್ನಾನಕ್ಕೆಂದು ಹೋಗಿ ಬಂದಳು. ಶಹಬ್ ನ ಕೊಟಡಿಯಲ್ಲಿ  ಅಕ್ಕಂದಿರು, ಅತ್ತಿಗೆ ಬಂದು, ಏನೇನೋ ಗುಸುಗುಸು ಮಾತಾಡುತಿದ್ದರು. ನಾಜಿಯ ಹೊರ ಬಂದಿದ್ದನ್ನು ನೋಡಿ ತಮ್ಮ ಪಾಡಿಗೆ ತಾವು ಅಲ್ಲಿಂದ  ಹೋದರು.
ಬೆಳಗಿನ ಉಪಾಹಾರ ಚಹಾ ಎಲ್ಲ ಮಗುಮ್ಮಾಗಿ ಮುಗಿಯಿತು.
ಒಳಗಿನಿಂದ ಶಹಬ್ ನ ತಾಯಿ " ಹಾಯ್!! ಅಲ್ಲಾಹ್ , ಎಲ್ಲಿಂದ ಗಂಟು ಬಿದ್ದಳೋ. ಬೇಡ ಅಂದರೂ ಇವಳೇ ಬೇಕು ಅಂದ. ಹೋಯ್ತು ನಮ್ಮ ಖಾಂದನ್ , ಮರ್ಯಾದ ಎಲ್ಲ " ಎಂದು ಅಳುತಿದ್ದರು.
ಏನೆಂದು ಅರಿಯುವ ಮೊದಲೇ ಅಲ್ಲ್ಲಿ ಇರುವ ಎಲ್ಲರ ಕಣ್ಣು ನಾಜಿಯಳನ್ನು ಇರಿಯುತ್ತಿದ್ದವು.
"ಏನೂ ಆಗಿಲ್ಲ ಬಿಡು ಬೇಗಂ" ಎನ್ನಲು ನಾಜಿಯ ಮಾವ,
"ಅರೆ ಅಲ್ಲಾಹ್, ಈ ರಂಡಿ ಬೇಡ ಅಂದೆ. ಈ ಮನೆಹಾಳ ಹೋಗಿ ಗಂಟು ಬಿದ್ದ. ಇನ್ನು ನಮ್ಮ ಸಲೀಮ ನಿಕಾಹ್ ಹೇಗೆ ಮಾಡೋದು?. ಗೊತ್ತ ನಿಮಗೆ" ಎಂದು ದುರುಗುಟ್ಟಿದಳು.
"ಏನು ಎಂದು? " ತನ್ನಲ್ಲೇ ತಬ್ಬಿಬ್ಬುಗೊಳ್ಳುತ್ತಾ ನಾಜಿಯ ತನ್ನ ಕೋಣೆಯತ್ತ ಸಾಗಲು, ಆಕೆಯ ಮೊದಲ ವಾರಗಿತ್ತಿ ಸಕೀನಾ,
ಬಂದು ಬಾಗಿಲು ಹಾಕಿ ಮೆಲ್ಲಗೆ ನಾಜಿಯ ಹತ್ತಿರ ಬಂದು,
"ಈ ಮನೆ ಖಾನ್ದಾನ್ ಉಳಿಯಬೇಕಂದರೆ  ನಿಜ ಹೇಳು ನಾಜಿಯ, ಚಾದರ್ ಮೇಲೆ ಖೂನ್ ಯಾಕೆ ಇಲ್ಲ?" ಎಂದಳು.
ಆಗ ನಾಜಿಯಗೆ ಅರಿವಾಗತೊಡಗಿತು. ಇವರೆಲ್ಲ ಚಾದರ್ ಬಗ್ಗೆ ಹೇಳುತ್ತಿದ್ದಾರೆ.
ಅಲ್ಲಾಹ್ ಎಂತ ದುರ್ಗತಿ ಬಂತು.  ಏನೂ ಹೇಳೋದು? ಶಹಬ್ ಬೇರೆ ಇಲ್ಲ. ದೇವರೇ ನೀನೆ ಕಾಪಾಡಬೇಕು. ಎಂದು
"ದೀದಿ, ಹಾಗೇನು ಇಲ್ಲ ರಾತ್ರಿ ಏನೂ ಅಗಿಲ್ಲ." ಅಂದಳು.
"ಸುಳ್ಳು ಹೇಳಬೇಡ ನಾಜಿ!!, ನಾನು ಇಲ್ಲಿಯ ದೊಡ್ಡ ಸೊಸೆ, ಶಹಬ್ ಹೇಳಿದ ಪಹೇಲಿ ರಾತ್ ಆಯ್ತು ಅಂತ. ನನ್ನ ಮಾತಿಗೆ ಬೆಲೆ ಇಲ್ಲವ?".
"ಏನಿಲ್ಲ ದೀದಿ" ಎಂದು ಬಿಕ್ಕಿ ಅತ್ತಳು.
"ಸರಿ, ಶಹಬ್ ಬರ್ತಾರೆ. ಮಾತಾಡುವಾ" ಅಂತ ಹೊರ ಹೋದಳು.
ನಾಜಿಯಗೆ ಒಂದೊಂದು ಕ್ಷಣವೂ ನಿಮಿಷಗಳಂತೆ ಉರುಳುತಿತ್ತು. ಒಳಗಿಂದ ಏನೇನೋ ಬೈಗುಳಗಳು ಈಟಿಯಂತೆ ಕಿವಿಗೆ ಬೀಳುತ್ತಿದವು. "ಅಲ್ಲಾ!!  ಎಲ್ಲಿಂದ ಎಲ್ಲಿಗೆ ಬಂದೆ. ಅಂದೇ  ಚೆನ್ನಿತ್ತು" ನೊಂದಳು.

ಅಷ್ಟರಲ್ಲೇ ಶಹಬ್ ಬಂದ. ಆತನ ಅಮ್ಮಿ
"ಬೇಟ, ಬೇಡ ಅಂತ ಹೇಳಿದ್ದೆ ಅವಳನ್ನೇ ನಿಕಾಹ್ ಮಾಡಿಕೊಂಡೆ. ಈಗ ನೋಡು ನಮ್ಮ ಖಾಂದಾನ್  ಮರ್ಯದ ಹೊಯ್ತು. ತಲ್ಲಾಕ಼್ ಕೊಟ್ಟುಬಿಡು. ನಿಂಗೆ ಬೇರೆ ನಿಕಾಹ್ ಮಾಡ್ತೀನಿ " ಎಂದು ಬೊಬ್ಬಿರಿಯುತ್ತಿದ್ದ ಮಾತನ್ನು ಕೇಳಿ ನಾಜಿಯ ಮನದಲ್ಲಿ ನೂರು ಡಂಗುರ ಬಾರಿಸಿದ ಹಾಗೆ ಆಯಿತು.
"ಅಮ್ಮೀ, ಹಾಗೇನು ಆಗಿಲ್ಲ. ಈಗೆಲ್ಲ ಹುಡುಗಿಯರು ಕೆಲಸ, ಆಟ, ಎಲ್ಲದರಲ್ಲೂ ಇದ್ದರೆ. ಏನೂ ಆಗಿಲ್ಲ. ನಾಜಿಯ ಒಳ್ಳೆ ಲಡ್ಕಿ ಹಾಗೆ ಒಳ್ಳೆ ಮನೆಯವಳು ಸಹ " ಎನ್ನಲೂ,
"ಶಹಬ್, ನಿನಗೆ ಅವಳು ಏನು  ಮೋಡಿ  ಮಾಡಿದ್ದಳೋ? ನಮ್ಮ ಖಾನ್ದಾನ್ ನಲ್ಲಿ ಇಂತ ಹುಡುಗಿ ಬೇಡ. ಸುಮ್ನೆ ಅವಳನ್ನೇ ಮಾಡುವೆ ಆಗ್ಬೇಕು ಅಂತ ಹಠ ಮಾಡಿದ್ದಿ ನೀನು. ನನಗಂತೂ ಇಷ್ಟ ಇಲ್ಲ. ನಿನ್ನ ಬೆಹೆನ್ ನಿಕಾಹ ಯಾರು ಮಾಡ್ತಾರೆ ?"
ಎಂದು ಅಳಲು ಶುರು ಮಾಡಿದಳು.
ಇತ್ತ ನಾಜಿಯ, ' ರಫೀ, ನೋಡು ನಿನ್ನ ತಪ್ಪಿನಿಂದ ನನ್ನ ಜೀವನ ಅಲ್ಲದೆ ಇಲ್ಲಿ ಎಲ್ಲರ ಜೀವನ ಕೆಡುತ್ತಿದೆ. ಅಲ್ಲಾ, ನಾನಿನ್ನು ಬದುಕಬೇಕೆ? ಶಹಬ್ ಜೀ' ಎಂದು ಕಂಗೆಟ್ಟಳು.

ಕೋಪಿಸಿಕೊಂಡ ಶಹಬ್ ರಾತ್ರಿ ಮನಗೆ ಬರಲಿಲ್ಲ.  ಅಂದು ರಾತ್ರಿ ನಾಜಿಯ ಗೆ ಊಟ ಸಿಗಲಿಲ್ಲ. ಮತ್ತದೇ ಮಾತುಗಳು ಅವಳನ್ನು ಇರಿಯುತ್ತಿದ್ದವು. ಮಾರನೆಯ ದಿನ ಬಂದ ಶಹಬ್,
"ಮಾಫ್ ಕರೋ ನಾಜಿಯ, ಏನೋ ಬೇಸರ ಆಯ್ತು. ನಿನಗೇನು ತೊಂದರೆ ಆಗೊಲ್ಲ. ಅಮ್ಮಿ ಸ್ವಲ್ಪ ಹಾಗೆನೆ. ಸರಿ ಹೋಗ್ತಾರೆ" ಎಂದ.
"ಶಹಬ್ ಜೀ, ನನ್ನಿಂದ ನಿಮಗೆಷ್ಟು ತೊಂದರೆ ಕಷ್ಟ ನೋವು. ನನಗೆ ತಲ್ಲಕ಼್ ಕೊಟ್ಟುಬಿಡಿ, ಬೇರೆ ಒಳ್ಳೆ ಲಡ್ಕಿ ನೋಡಿ ನಿಕಾಹ್ ಮಾಡಿಕೊಳ್ಳಿ" ಎಂದಳು.
"ನಾಜಿಯ! ಕ್ಯಾ ಬಾತ್ ಕರ್ ರಹೇ ಹೊ. ನಿನ್ನ ಮದುವೆ  ಆಗಿದ್ದು ತಲ್ಲಾಕ಼್ ಕೊಡೋದಿಕ್ಕೆ  ಅಲ್ಲ. ಇನ್ನೆಂದು ಈ ರೀತಿ ಮಾತು ಆಡಬೇಡ" ಎಂದು ಹೊರಗೆ ಹೋದ.

ಇತ್ತ ನಾಜಿಯ ಇಬ್ಬಂದಿ ಸ್ಥಿತಿಯಲ್ಲಿ ಒಳಗೊಳಗೇ ನಳುಗುತ್ತಿದಳು. ಮದುವೆ ಆಗಿ ಕೆಲವು ತಿಂಗಳು  ಕಳೆದಿದ್ದರೂ ಆಕೆಗೆ ಅಲ್ಲಿ ಸ್ವಾತಂತ್ರ್ಯವಿರಲಿಲ್ಲ. ಏನೇ ಕೆಲಸ ಮಾಡಿದರು ಅಲ್ಲೊಂದು ಕೊಂಕು, ಅಸಡ್ಡೆ ಅವರ ಮನೆಯಲ್ಲಿ ಕಾಣುತಿತ್ತು. ಬಂದು ಹೋಗೋ ಬಂಧುಗಳೂ ಸಹ ಆಕೆಯ ಬಳಿ ಮಾತನಾಡಲು ಹಿಂಜರಿಯುತ್ತಿದ್ದರು. ಮನೋವೇದನೆಯಲ್ಲಿ ನಾಜಿಯ ನರಳುತ್ತಿದ್ದಳು.
ಶಹಬ್ ಸಹ ಮೊದಲಿನ ಆಸಕ್ತಿ, ಅಕ್ಕರೆ ತೊರಿಸುತ್ತಿರಲಿಲ್ಲ. ನಾಜಿಯ ಒಂಟಿಯಾಗಿ ತನ್ನ ಪಾಡಿಗೆ ತಾನು ಖುರಾನ್ ಪಠನ ಮಾಡುತ್ತಾ, ಸಿಕ್ಕಷ್ಟು ಊಟ ಮಾಡುತ್ತಿದಳು. ಆಕೆ ಅದೊಂದು ಸೆರೆಮನೆಯಾಯಿತು.

ಹೀಗೊಮ್ಮೆ ಶಹಬ್ ತಂಗಿಗೆ ವರನನ್ನು ನೋಡಲು ಎಲ್ಲರೂ ದೂರದ ಊರಿಗೆ ೪ ದಿನ ಹೋಗಬೇಕಾಯಿತು. ಶಹಬ್ ತನಗೆ ಕೆಲಸ ಇದೆ ಮೈಸೂರಿಗೆ ಹೋಗಲೇಬೇಕು ಅಂತ ಹೋಗಲಿಲ್ಲ. ಮನೆಯ ಯಾರೊಬ್ಬರು ಸಹ ನಾಜಿಯಳನ್ನು ಕರೆಯಲಿಲ್ಲ.
ಮನ ನೊಂದ ಸಧ್ಯ ಈಗಲಾದರೂ ಅಮ್ಮೀ ಮನೆಗೆ ಹೋಗಬಹುದು ಎಂದು ಶಹಬ್ ನ ಕೇಳಿ ಹೋಗಬೇಕೆಂದು ನಿರ್ಧರಿಸಿದಳು.
ಆದರೆ ಆ ರಾತ್ರಿ ಶಹಬ್ ಬರೋದಿಲ್ಲ, ಬಂದರೆ ತಡ ಆಗುತ್ತೆ ಒಂದೆರಡು ದಿನ ಬಿಟ್ಟು ಹೋಗು ಎಂದು ಮೈಸೂರಿಗೆ ಹೋದ.
ಹೇಗೂ ತಡ ಆಗುತ್ತಲ್ಲ ಎಂದು ಆ ರಾತ್ರಿ ನಾಜಿಯ ಬೇಗನೆ ಊಟ ಮುಗಿಸಿ ಟಿವಿ ನೋಡುತ್ತಾ ಇರಲು, ಬಾಗಿಲು ಬಡಿದ ಸದ್ದಾಯಿತು. ಶಹಬ್ ಬಂದನೆಂದು ಬಾಗಿಲು ತೆರೆದರೆ ಬಂದದ್ದು ಆತನ ಅಣ್ಣ ಮುಷ್ತಾಕ್.
ಗಾಬರಿಯಿಂದ ನಾಜಿಯ "ಆಪ್ ?" ಎನ್ನಲು,
"ಹಾ, ಆರೋಗ್ಯ ಸರೀಲ್ಲ ಅದಕ್ಕೆ ಬಂದೆ" ಎಂದ ಮುಷ್ತಾಕ್.
ಅವನು ಮಾತಾಡುವಾಗ ಮದ್ಯಪಾನ ಮಾಡಿದ ವಾಸನೆ ಬಡಿಯಿತು ನಾಜಿಯಳಿಗೆ. ಭಯದಿಂದ ಮನಸಲ್ಲೇ "ಅಲ್ಲಾ" ಎಂದು ಗೋಗರೆದಳು. ಟಿವಿಯನ್ನು ಆರಿಸಿ ತನ್ನ ಕೋಣೆಗೆ ಹೋಗಲು ಮುಷ್ತಾಕ್, ಹಿಂದೆಯೇ ಬಂದು
"ನಾಜಿಯಾ, ಇವತ್ತೊಂದಿನ ನನ್ನವಳಾಗು, ನಿನ್ನ ರಾಣಿ ಹಾಗೆ ನೋಡ್ಕೋತೀನಿ" ಎಂದು ತನ್ನ ಎದೆ ಸವರಿಕೊಂಡ.
"ಹಾಯ್ ಅಲ್ಲಾ , ಏನಾಗಿದೆ ನಿಮಗೆ. ಕುಡಿದು ಬಂದಿದ್ದಿರ.. ನಿಮ್ಮ ಕೋಣೆಗೆ ದಯವಿಟ್ಟು ಹೋಗಿ" ಎಂದು ಹೇಳಿದಳು.
"ಅರರೆ, ಸಿರ್ಫ್ ಏಕ ರಾತ್ ಬಾ ನನ್ನ ಜೊತೆ, ನೀನು ಹಾಸಿಗೆ ಮೇಲೆ ಶಹಬ್ ಜೊತೆ ಸುಖ ಪಟ್ಟಿದ್ದು ಎಷ್ಟು ಅಂತ ಗೊತ್ತು.
ನಿನ್ನ ಸೋನೆ ಕಿ ಜಿಸ್ಮ್ ನನಗೆ ಅವತ್ತಿಂದ ದೀವಾನ ಮಾಡಿದೆ. ನಿನಗೆ ಸ್ವರ್ಗ ಏನು ಅಂತ ತೋರಿಸ್ತೀನಿ" ಎಂದು ಕೆಟ್ಟದಾಗಿ ನಕ್ಕ.
"ಜೀ, ನೀವು ನನ್ನ ಬೈಯ್ಯಾ ರೀತಿ. ಇಲ್ಲಾಂದ್ರೆ ಕಿರಿಚಿ ಸುತ್ತ ಮುತ್ತ ಮನೆಯವರನ್ನೆಲ್ಲ ಕರೀತೀನಿ. ನಿಮ್ಮ ಮರ್ಯಾದೆ ಏನೂ ಅಂತ ತೋರಿಸ್ತೀನಿ" ಎಂದು ಜೋರಾಗಿಯೇ ಹೇಳಿದಳು.
"ಗೊತ್ತು ಬಾರೆ, ನಿನ್ನ ಮರ್ಯಾದಾ..? ನೀನು ರಫೀಕ್ ಸುಖ ಪಟ್ಟದ್ದು, ಸುತ್ತಾಡಿದ್ದು ಎಲ್ಲ ಗೊತ್ತು. ಅದನ್ನ ಹೇಳಿದರೆ ಯಾರ ಮರ್ಯಾದ ಹೋಗುತ್ತೆ ನೋಡ್ಕೋ. ಈಗ ಬರ್ತಿಯೋ ಇಲ್ಲವೊ..?" ಎಂದು ಕೈ ಹಿಡಿಯಲು, ನಾಜಿಯ ತನ್ನ ಗುಟ್ಟು ಇವನಿಗೆ ಹೇಗೆ ಗೊತ್ತಾಯಿತು
"ಅಲ್ಲಾಹ್ ಹಾಗೇನಿಲ್ಲ, ಬಿಟ್ಟುಬಿಡಿ" ಎಂದಳು.
"ರಂಡೀ, ನೀನು ಎಂಥವಳು ಅಂತ ಗೊತ್ತು" ಎಂದು ನಾಜಿಯ ಕೆನ್ನೆಗೆ  ಬಾರಿಸಿದ.
ಅವಳು ಬವಳಿ ಬಂದು ಬಿದ್ದು ಬಿಟ್ಟಳು. ಮುಷ್ತಾಕ್ ತನ್ನ ಕಾಮದಾಹ ತೀರಿಸಿಕೊಂಡ. ರಾತ್ರಿಯೇ ಹೊರಗೆ ಹೋದ.
ತನಗಾದ ಆಘಾತದಿಂದ ಚೇತರಿಸಿಕೊಳ್ಳದ ನಾಜಿಯ ಶಹಬ್ ಗೆ ಫೋನ್ ಮಾಡಿದಳು. ಒಂದೆರಡು ಗಂಟೆಯಲ್ಲಿ ಶಹಬ್ ಬಂದು ಆರೈಕ ಮಾಡಿದ. ರಾತ್ರಿಯ ಘಟನೆ ತಿಳಿಸಿದಳು.

"ಮಾಫ್ ಕರಿಯೇ ಶಹಬ್ ಜೀ, ನಾನು ನಿಮಗೆ ಒಳ್ಳೆ ಬೀವಿ  ಅಲ್ಲ. ನನ್ನ  ಜೀವನ  ಈ ಚಾದರ ನಂತೆ ಮೈಲಿ ಆಯ್ತು.
ಈ ಮನೆಯಲ್ಲಿ ನನಗೆ ಸ್ಥಾನ ಮಾನ ಇಲ್ಲ. ಇನ್ನು ಈ ರೀತಿಯ ಅತ್ಯಾಚಾರಗಳು ನನಗೆ ತಡೆಯಲು ಆಗೋಲ್ಲ. ನಾನು ನಿಮಗೆ ಯೋಗ್ಯಳಲ್ಲ. ನಾನು ಈಗ ಒಂದು ನಿರ್ಧಾರಕ್ಕೆ ಬಂದಿದ್ದೀನಿ, ಒಂದು ಸಾಯಬೇಕು ಇಲ್ಲಾಂದ್ರೆ ನೀವು ನನಗೆ ತಲ್ಲಾಕ್  ಕೊಡಬೇಕು. ಎಲ್ಲಾದರೂ ದೂರ ಹೋಗಿ ನನ್ನ ಪಾಡಿಗೆ ನಾನು ಬದುಕುತ್ತಿನಿ. ಇಂತ ಸೆರೆಮನೆ ನನಗೆ ಬೇಡ ಶಹಬ್ " ಎಂದು ಅವನ ಕಾಲ ಬಳಿ  ಕುಸಿದಳು.

"ಇಲ್ಲ ನಾಜಿಯ ನಿನ್ನ ಬಿಟ್ಟು ಬದುಕೋಕೆ ನನಗೆ ಆಗೋಲ್ಲ. ಆಗಿದ್ದೆಲ್ಲ ಮರೆತು ಬೇರೆ ಮನೆ ಮಾಡೋಣ" ಎಂದ.
"ಬೇಡ ಶಹಬ್ ಜಿ, ನನ್ನಿಂದ ನಿಮಗೆ ಮುಂದೆಯೂ ತೊಂದರೆ ಆಗುತ್ತೆ, ನೀವು ಬೇರೆ ನಿಕಾಹ್ ಮಾಡಿಕೊಂಡು ಸುಖವಾಗಿರಿ" ಎಂದಳು.
"ಆಗೋಲ್ಲ ನಾಜಿಯಾ" ಎಂದ ಶಹಬ್.
"ಆಗೋಲ್ಲ ಅಂದರೆ .. ನಾನೇ ನಿಮಗೆ ತಲ್ಲಾಕ್ ಕೊಡ್ತೀನಿ" ಎಂದು
"ತಲ್ಲಾಕ್ .. ತಲ್ಲಾಕ್ ... ತಲ್ಲಾಕ್ " ಎಂದು ಮೂರು ಬಾರಿ ಹೇಳಿ ತನ್ನ ಪಾಡಿಗೆ ತಾನು ಮಂಚದ ಮೇಲೆ ಮಲಗಿದಳು.