Monday, January 9, 2023

ಕೆವನ್ ಚಾಂಡ್ಲರ್ - ಒಬ್ಬ ಅಸಾಮಾನ್ಯ ವ್ಯಕ್ತಿ

 

ಕೆವನ್ ಚಾಂಡ್ಲರ್ - ಒಬ್ಬ ಅಸಾಮಾನ್ಯ ವ್ಯಕ್ತಿ

ಸ್ನೇಹವೆಂದರೆ  ವಯಸ್ಸು ಲಿಂಗ ಜಾತಿ ಮತ ಬೇಧವಿಲ್ಲದೆ ಒಬ್ಬರಿಗೊಬ್ಬರು ಸಹಾಯ ಪ್ರೀತಿ ಹಂಚಿಕೊಳ್ಳುವ ಒಂದು ಬಾಂಧವ್ಯ. 

ನಾವು ಈಗ ಪರಿಚಯಿಸುವ ಇಲ್ಲೊಬ್ಬ ವ್ಯಕ್ತಿ ವಿಭಿನ್ನವಾಗಿ ಕಾಣುತ್ತಾರೆ ಹಾಗೆಯೆ ಆತನ ಸ್ನೇಹಿತರೂ ವಿಭಿನ್ನವೇ... 

ಆತನ ಹೆಸರು ಕೆವನ್ ಚಾಂಡ್ಲರ್

ಕೆವನ್ ಚಾಂಡ್ಲರ್ ತನ್ನ ಹೆತ್ತವರು ಮತ್ತು ಇಬ್ಬರು ಒಡಹುಟ್ಟಿದವರೊಂದಿಗೆ ಅಮೆರಿಕಾದ ಉತ್ತರ ಕೆರೊಲಿನಾದ ತಪ್ಪಲಿನಲ್ಲಿ ಬೆಳೆದರು. ಮನೆಯಲ್ಲಿ ಕಿರಿಯರಾದ ಕೆವನ್, ಅವರು ಅಪರೂಪದ ನರಸ್ನಾಯುಕ ಕಾಯಿಲೆಯಾದ ಬೆನ್ನುಮೂಳೆಯ ಸ್ನಾಯು ಕ್ಷೀಣತೆ - Spinal Muscular Atrophy (SMA) ಎಂಬ ರೋಗದಿಂದ ಬಳಲುತ್ತಿದ್ದಾರೆ.

ಈಗ ಕೆವನ್ ರ ವಿಶೇಷತೆ ಏನು ಎಂಬುದನ್ನು ತಿಳಿದುಕೊಳ್ಳೋಣ. 

ತಾನೊಬ್ಬ ಅಂಗವಿಕಲ ಎಂದು ಎಷ್ಟೋ ಜನರು ತಮ್ಮ ತಮ್ಮಅಂಗವಿಕಲತೆಯನ್ನೇ ದೌರ್ಭಾಗ್ಯವೇ ಸರಿ  ಜೀವನ ಅಂಧಕಾರದಲ್ಲಿ ಮುಳುಗಿತು ಎನ್ನುವ ಕಾಲದಲ್ಲಿ ಈ ಕೆವನ್ ಎಂಬ ಕೈ, ಕಾಲು ಇಲ್ಲದ ವ್ಯಕ್ತಿ ತನ್ನ ಸಾಮರ್ಥ್ಯಕ್ಕೂ ಮೀರಿ ವಿಶಿಷ್ಟ ಸಾಧನೆಗಳನ್ನು ಮಾಡಿದ್ದಾರೆ. ಬರಿ ಅವರೊಬ್ಬರೇ ಅಲ್ಲ ಅವರ ಜೊತೆಯಲ್ಲಿರುವ ಸ್ನೇಹಿತರೂ ಸಹ ವಿಶಿಷ್ಟ ಸಾಧನೆಗಳಿಗೆ  ಜೊತೆಗೂಡಿದ್ದಾರೆ.

ಕೆವನ್ ಚಾಂಡ್ಲರ್ ಹೇಳಿಕೊಂಡ ಹಾಗೆ 

"ನನ್ನ ಹೆಸರು ಕೆವನ್ ಚಾಂಡ್ಲರ್. ನಾನು 35 ವರ್ಷ ವಯಸ್ಸಿನವನಾಗಿದ್ದೇನೆ ಮತ್ತು ನನ್ನ ಸುಂದರ ಪತ್ನಿ ಕೇಟಿಯೊಂದಿಗೆ ಫೋರ್ಟ್ ವೇನ್, ಇಂಡಿಯಾನಾ ಪೊಲೀಸ್ ನಲ್ಲಿ ವಾಸಿಸುತ್ತಿದ್ದೇನೆ. ನಾನು ಬೆನ್ನುಮೂಳೆಯ ಸ್ನಾಯು ಕ್ಷೀಣತೆ (SMA) ಎಂಬ ಕಾಯಿಲೆಯೊಂದಿಗೆ ಹುಟ್ಟಿದ್ದೇನೆ, ಇದು ನನ್ನ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ, ಇದರಿಂದ ನಾನು ನಡೆಯಲು ಸಾಧ್ಯವಿಲ್ಲ. ನಾನು ಸಾಮಾನ್ಯವಾಗಿ ತಿರುಗಾಡಲು ಗಾಲಿಕುರ್ಚಿಯನ್ನು ಬಳಸುತ್ತೇನೆ, ಆದರೆ ಪ್ರಯಾಣಕ್ಕಾಗಿ ನನ್ನ ಅತ್ಯುತ್ತಮ ಸಂಪನ್ಮೂಲ ಎಂದರೆ ಅದು ಗೆಳೆತನವಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ."

2015 ನೇ ಇಸವಿಯಲ್ಲಿ ಕೆವನ್ ತನ್ನ ಓದಿನ ನಂತರ ತನ್ನ ಗೆಳೆಯರಿಗೆ ಯೂರೋಪ್ ಪ್ರವಾಸ ಮಾಡಲು ಬಯಸುತ್ತಾರೆ. ಎಲ್ಲರಂತೆ ತಾನೂ ಸಹ ಈ ಸುಂದರವಾದ ಪ್ರಪಂಚ ನೋಡಬೇಕೆಂದು ಬಯಸಿದಾಗ ಕೆವನ್ ನ ಸ್ನೇಹಿತರು ಹಣ ಸಂಗ್ರಹಿಸಿ  "We Carry Kevan" ಎಂಬ ಒಂದು ಅಭಿಯಾನವನ್ನು ಆರಂಭಿಸಿದರು. ಚಿಕ್ಕಮಕ್ಕಳನ್ನು ಕೂಸುಮರಿ - piggy back ಮಾಡುವ ಹಾಗೆ ಒಂದು ವಿಶೇಷ  Kid Carry Backpack ಕೆವನ್ ಗಾಗಿ ಸಿದ್ಧಪಡಿಸಿ ಅದನ್ನು ಅಳವಡಿಸಿಕೊಂಡು, ಎಲ್ಲೆಲ್ಲಿ ಗಾಲಿ ಕುರ್ಚಿ ಹೋಗಲು ಆಗುವುದಿಲ್ಲವೋ ಅಲ್ಲಲ್ಲಿ ಈ ವಿಶೇಷ   Kid Carry Backpack ನಲ್ಲಿ ತಮ್ಮ ಗೆಳೆಯ ಕೆವನ ನನ್ನು ಕೂರಿಸಿಕೊಂಡು ಗಾಲಿಕುರ್ಚಿಯನ್ನು ಮನೆಯಲ್ಲೇ ಬಿಟ್ಟು ೩ ವಾರಗಳ ಯೂರೋಪ್ ಪ್ರವಾಸವನ್ನು ಕೈಗೊಂಡರು. ಆ ಪ್ರವಾಸದಲ್ಲಿ ಫ್ರಾನ್ಸ್, ಜಾಂಗೊ ರೆನ್‌ಹಾರ್ಡ್‌ನ ಮನೆಗೆ ಭೇಟಿ ನೀಡಲು; ಇಂಗ್ಲೆಂಡ್, ಕೆನ್ಸಿಂಗ್ಟನ್ ಮತ್ತು ಐರ್ಲೆಂಡ್ ಜಗತ್ತನ್ನು ಅನ್ವೇಷಿಸಲು, ಸ್ಕೆಲ್ಲಿಗ್ ಮೈಕೆಲ್ ದ್ವೀಪವನ್ನು ಧೈರ್ಯದಿಂದ ಎದುರಿಸಲು ಪ್ರವಾಸ ಯಶ್ಶಸ್ವಿಯಾಗಿ ಮಾಡಿದರು. 

"ಈ ಸ್ನೇಹಿತರೊಟ್ಟಿಗೆ ಹೋದ ಸ್ಥಳಗಳು, ಪ್ರತಿದಿನ ಆಸಕ್ತಿದಾಯಕ ಅನುಭವಗಳಿಂದ ತುಂಬಿರುತ್ತಿತ್ತು" ಎಂದು ಕೆವನ್ ನೆನಪಿಸಿಕೊಳ್ಳುತ್ತಾರೆ. ಅವರು ಪ್ಯಾರಿಸ್‌ನ ಬೀದಿಗಳಲ್ಲಿ ನೃತ್ಯ ಮಾಡಲು ಅವಕಾಶ ಸಿಕ್ಕಿತು, ಇಂಗ್ಲಿಷ್ ಗ್ರಾಮಗಳ ಮೂಲಕ ಪಾದಯಾತ್ರೆ ಮಾಡಿದರು ಮತ್ತು ಐರ್ಲೆಂಡ್‌ನ ಕರಾವಳಿಯ ಸ್ಕೆಲ್ಲಿಗ್ ಮೈಕೆಲ್ ದ್ವೀಪವನ್ನು ಸಹ ಅಳೆಯುತ್ತಾರೆ!

ಕೆವನ್ ಹೇಳುವಂತೆ "ಈ ಅದ್ಭುತ ಅನುಭವದ ನಂತರ, ನನ್ನ ಸ್ನೇಹಿತರು ಮತ್ತು ನಾನು ಪ್ರವಾಸ ಮಾಡಿದಂತೆ ಇತರ ವಿಕಲಾಂಗ ಜನರೂ  ತಮ್ಮ ಜೀವನದಲ್ಲಿ ಪ್ರವಾಸ ಮಾಡಲು ನಾನು ಬಯಸಿದೆ. ಅದರಿಂದ  We Carry Kevan ಅಧಿಕೃತವಾಗಿ ಸಂಘಟಿತವಾದ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿ ಮಾರ್ಪಟ್ಟಿತು. ಬೆನ್ನು ಮೂಳೆ ತೊಂದರೆಗೆ ಒಳಪಟ್ಟ ವಿಕಲಾಂಗ ಕುಟುಂಬಗಳಿಗೆ ಹೆಚ್ಚು ಆರೈಕೆ ಒದಗಿಸಲು ಈ ಸಂಸ್ಥೆ ಸಹಾಯ ಮಾಡಲು ಪ್ರಾರಂಭಿಸಿದೆ. "

2018 ರಲ್ಲಿ ಕೆವನ್ ತಮ್ಮ  ಆರು ಗೆಳೆಯರೊಂದಿಗೆ ಮತ್ತೊಂದು ದೊಡ್ಡ ಪ್ರವಾಸವನ್ನು ಕೈಗೊಂಡರು, "ಈ ಬಾರಿ ಚೀನಾಕ್ಕೆ ಪ್ರವಾಸ ಹೋದೆವು. ಅಲ್ಲಿ ನಾವು ಕೆಲವು ನಂಬಲಾಗದ ವಿಷಯಗಳನ್ನು ನೋಡಿದ್ದೇವೆ ಮತ್ತು ಮಹಾಗೋಡೆಯ ಮೇಲೆ ನಡೆದಿದ್ದೇವೆ. ನಾವು ವಿಕಲಾಂಗ ಮಕ್ಕಳ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿದ್ದೇವೆ, ಬ್ಯಾಕ್‌ಪ್ಯಾಕ್ ಮತ್ತು ಭರವಸೆಯ ಸಂದೇಶವನ್ನು ಹಂಚಿಕೊಂಡಿದ್ದೇವೆ" ಎಂದು ಹೆಮ್ಮೆಯಿಂದ ಕೆವನ್ ಹೇಳಿಕೊಳ್ಳುತ್ತಾರೆ. 

ಕೆವನ್ ನಿರೀಕ್ಷಿದಂತೆ, ಅವನು ತನ್ನ ಸ್ನೇಹಿತೆ ಮತ್ತು ಜೀವನ ಸಂಗಾತಿ ಕೇಟಿ ಯನ್ನು ಭೇಟಿಯಾದರು. ಕೆವನ್ ಮತ್ತು ಆತನ ಸ್ನೇಹಿತರು ಚೀನಾದಲ್ಲಿ ಪ್ರಯಾಣಿಸುತ್ತಿದ್ದಾಗ, ಅವರು ವಿಕಲಾಂಗ ಮಕ್ಕಳ ಆರೈಕೆ ಕೇಂದ್ರದಲ್ಲಿ ಒಂದು ವಾರ ಕಳೆದರು. ಅಲ್ಲಿ ಅವರು ತಮ್ಮ ಕನಸಿನ ಹುಡುಗಿ ಕೇಟಿಯನ್ನು ಭೇಟಿಯಾದರು, ಅವರು ಲಾಭರಹಿತವಾಗಿ ಸಂಸ್ಥೆಯಲ್ಲಿ ಕೆಲಸ ಮಾಡಿದರು ಮತ್ತು 2 ವರ್ಷಗಳ ನಂತರ ಅವರು ಮದುವೆಯಾದರು. 

ಕೆವನ್ ಜಾನ್ ವೆಸ್ಲಿ ಕಾಲೇಜಿನಿಂದ ಕೌನ್ಸೆಲಿಂಗ್‌ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಆತ ಒಬ್ಬ ಅತ್ಯಾಸಕ್ತಿಯ ಕಥೆಗಾರ, ಕೆವನ್ ತನ್ನ ಸ್ನೇಹಿತರೊಂದಿಗೆ ತನ್ನ ಸಾಹಸಗಳ ಆತ್ಮಚರಿತ್ರೆ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.  ಮತ್ತು ಅಂಗವೈಕಲ್ಯದೊಂದಿಗೆ ತನ್ನ ಅನನ್ಯ ಜೀವನದ ಬಗ್ಗೆ ಪ್ರಪಂಚದಾದ್ಯಂತ ಮಾತನಾಡುತ್ತಾರೆ. ಅವರು ವೀ ಕ್ಯಾರಿ ಕೆವನ್ - We Carry Kevan ಎಂಬ ಲಾಭೋದ್ದೇಶವಿಲ್ಲದ ಸಂಸ್ಥೆಯ ಸ್ಥಾಪಕರೂ ಆಗಿದ್ದಾರೆ. ಇಂದು ಆ ಸಂಸ್ಥೆ ಸುಮಾರು ಪ್ರಪಂಚದಾದ್ಯಂತ ೩೦ ದೇಶಗಳಲ್ಲಿ  ೬೫೦ ಕುಟುಂಬಗಳಿಗೆ ಸಹಾಯ ಮಾಡುತ್ತಿದೆ.

"ಅವರ ಈ ಪ್ರವಾಸ ಸಾಹಸವು ಅವರನ್ನು ಮುಂದೆ ಎಲ್ಲಿ ಕೊಡೊಯ್ಯುತ್ತದೆ ಎಂಬುದನ್ನು ಕಾಯಲು ಸಾಧ್ಯವಿಲ್ಲದೆ ಮುಂದಿನ ಪ್ರವಾಸಕ್ಕೆ ಅಣಿಯಾಗುತ್ತಿದ್ದಾರೆ"

ಹೆಚ್ಚಿನ ವಿವರಗಳಿಗೆ "https://wecarrykevan.org/" ವೆಬ್ ಸೈಟ್ ಅನ್ನು ಸಂದರ್ಶಿಸಬಹುದು.

ಆತನ ಭಾಷಣವನ್ನು  TED.com ನಲ್ಲಿ ಹಾಗೆ ಪ್ರವಾಸ ಮಾಡಿದ ವಿಡಿಯೋಗಳನ್ನು YouTube ನಲ್ಲಿಯೂ ಸಹ ನೋಡಬಹುದಾಗಿದೆ. 

ಕೃಪೆ: www.brightside.com & www.medium.com