Thursday, June 30, 2016

ಅಪ್ಪ..!!

ಅಂದು ತನ್ನ ಹೆಂಡತಿಯ ಬೈಗುಳದಿಂದ ಸಾಕಾಗಿದ್ದ ರಾಜೀವ. ಸದಾ ಗೊಣಗುತ್ತಿದ್ದ ತಂದೆಯನ್ನು ವೃದ್ಧಾಶ್ರಮಕೆ ಸೇರಿಸಲು ಅರ್ಜಿಯನ್ನು ತುಂಬಿಸುತ್ತಿದ್ದ. ಒಬ್ಬನೇ ಮಗ ನಾನು ಎಲ್ಲವೂ ಇದೆ ಹಣ, ಮನೆ, ಹೆಂಡತಿ, ಇಬ್ಬರು ಮಕ್ಕಳು, ತನ್ನ ಖಾಸಗಿತನಕ್ಕೆ ಅಡ್ಡಿಯಾಗಿರುವ ಅಪ್ಪ.
ಪ್ರತಿನಿತ್ಯ ಸುಧಾ ಅಪ್ಪನ ಬಗ್ಗೆ ಕೊಂಕು ಹೇಳುತ್ತಲೇ ಇದ್ದಳು.

"ಅವರು ಟಾಯ್ಲೆಟ್ ನಲ್ಲಿ ನೀರು ಹಾಕಿಲ್ಲ, ಬೆಡ್ ಮೇಲೆ ಉಚ್ಚೆ, ಚಪಾತಿ ಪಲ್ಯ ಅರ್ಧ ತಿಂದಿದ್ದಾರೆ, ಮಕ್ಕಳಿಗೆ ಓದೋದಿಕ್ಕೆ ಬಿಡದೆ ಅವರೊಂದಿಗೆ ಯಾವಾಗಲೂ ಆಟ. ಮನೆಗೆ ತನ್ನವರು ಬಂದಾಗ ಮಾತನಾಡಿಸೋಲ್ಲ, ಇಂಗ್ಲಿಷ್ ನ್ಯೂಸ್ ಪೇಪರ್ ತರೋಲ್ಲ, ಸದಾ ಅವರು ಹಾಕಿದ್ದ ಟಿ ವಿ ಚಾನೆಲ್ ನೋಡ್ಬೇಕು....." ಹೀಗೆ ಅಪ್ಪನ ವಿರುದ್ಧ ಇತರೆ ಅಪವಾದ ಪಟ್ಟಿಯನ್ನ ಒಪ್ಪಿಸುತ್ತಿದ್ದಳು.

ತನಗೂ ಅಷ್ಟೇ

ಏನಾದರೋ ಹೊಸ ವಸ್ತು ತಂದರೆ "ಯಾಕೋ ರಾಜೀವ ಇಷ್ಟು ಬೆಲೆ ಕೊಟ್ಟು ತಂದೆ?, ಮಾರ್ಕೆಟ್ ನಲ್ಲಿ ಇನ್ನು ಕಡಿಮೆ ಸಿಗೋದು, ಅವರು ಯಾರು?, ಇವತ್ತು ಯಾರ ಜೊತೆ  ಬಂದೆ, ಪೆನ್ಶನ್ ದುಡ್ಡು ತಗೊಂಡು ಬಾ, ಭಾನುವಾರ ವಾಕಿಂಗ್ ಕರ್ಕೊಂಡು ಹೋಗು, ಹೊಸ ಮೊಬೈಲ್ ಕೊಡಿಸು, ಮನೇಲಿ ಒಬ್ಬನೇ ಇರೋಕೆ ಆಗಲ್ಲ ಕೇಬಲ್ ಹಾಕಿಸು, ಶನಿವಾರ ಕಬ್ಬನ್ ಪಾರ್ಕು, ಲಾಲ್ ಬಾಗ್ ಸುತ್ತಿಸು.. ಅಬ್ಬಾ ಇಷ್ಟು ವಯಸ್ಸಾದ್ರೂ ಆಸೆ ಹೋಗಿಲ್ವಾ ಅಪ್ಪನಿಗೆ. ಅಮ್ಮ ಇದ್ದಿದ್ರೆ ಇನ್ನೆಷ್ಟು ಕಾಟ ಕೊಡ್ತಾ ಇದ್ದನೋ ಅಪ್ಪ.  ಮುವ್ವತ್ತು ವರ್ಷದಿಂದ ಅಮ್ಮನ ನೋಡಿದ ನೆನಪೇ ನನಗೆ ಇಲ್ಲ." ಎಂದುಕೊಳ್ಳುತ್ತ ವೃದ್ಧಾಶ್ರಮದ ಅರ್ಜಿಯನ್ನು ತುಂಬಿಸಿ ಕೊಟ್ಟು, ಅಪ್ಪ ಉಪಯೋಗಿಸುತ್ತಿದ್ದ ಬಟ್ಟೆ, ವಸ್ತುವನ್ನೆಲ್ಲ ಟ್ರಂಕ್ ನಲ್ಲಿ ಹಾಕಿಟ್ಟು  ಅಲ್ಲಿದ್ದ ಮ್ಯಾನೇಜರ್ ಕೊಟ್ಟ.

"ಹಬ್ಬ, ಹರಿದಿನ ಇದ್ದಾಗ ಬಂದು ಕರಕೊಂಡು ಹೋಗ್ತಿರೋ?"ಎಂದ ಮ್ಯಾನೇಜರ್.

"ಹಬ್ಬಗಳಿಗೆ ಏನೂ ಕರಕೊಂಡು ಬರೋದು ಬೇಡ, ಮಾಡಿರೋದನ್ನೇ ಕೊಟ್ಟು ಬನ್ನಿ" ಎಂದ ಸುಧಾಳ ಮಾತು ಕಿವಿಯಲ್ಲೇ ರಿಂಗಣಿಸಿತು.

"ಹಾ, ಆ ಸರ್, ಬರ್ತೀನಿ ನೋಡೋಣ " ಎಂದುತ್ತರಿಸಿದ ರಾಜೀವ.

"ಏನ್ ಜನಗಳೋ ಏನೋ" ಎಂದು ಅಂದುಕೊಳ್ಳುತ್ತ ಮ್ಯಾನೇಜರ್, ಅಪ್ಪನ ಟ್ರಂಕ್ ತೆಗೆದುಕೊಂಡು,
ಅಪ್ಪ ಕುಳಿತಲ್ಲಿಗೆ ಬಂದು "ಬನ್ನಿ ಸಾಮಿ, ನಿಮ್ಮ ಜಾಗಕೆ ಹೋಗೋಣ " ಎಂದು ಅಪ್ಪನನ್ನ ಎಬ್ಬಿಸಿಕೊಂಡು ಹೊರಟು ಹೋದ. ಅಪ್ಪ ಹಿಂತಿರುಗಿ  ರಾಜೀವನನ್ನು ನೋಡಲೇ ಇಲ್ಲ.

"ಎಷ್ಟು ಅಹಂ  ಅಪ್ಪನಿಗೆ. ತಿರುಗಿ ನೋಡಲಿಲ್ಲವಲ್ಲ, ಇರೋ ಒಬ್ಬ ಮಗ ಅನ್ನೋ ಮಮಕಾರ ಇಲ್ಲವಲ್ಲ, ಏನೋ  ನಾವಾಗಿದ್ದಕ್ಕೆ ವೃದ್ಧಾಶ್ರಮದಲ್ಲಿ ಬಿಟ್ಟಿದ್ದೀನಿ, ಬೇರೆ ಯಾರಾದ್ರೂ ಆಗಿದ್ರೆ ಬೀದಿ ಭಿಕಾರಿ ಮಾಡ್ತಾ ಇದ್ರು.. ತೊಂದರೆ ತಪ್ಪಿತು" ಎಂದು ಮನಸಲ್ಲೇ ಅಂದುಕೊಳ್ಳುತ್ತ ಮನೆ ಕಡೆ ಹೆಜ್ಜೆ ಹಾಕಿದ.

ಮೂರು-ನಾಲ್ಕು ದಿನಗಳ ನಂತರ ಅದೇ ವೃದ್ಧಾಶ್ರಮದಿಂದ "ಈ ವರ್ಷದಿಂದ ಆಶ್ರಮದ ಶುಲ್ಕ ಎರಡು ಸಾವಿರ ಜಾಸ್ತಿಯಾಗಿದೆ, ಬಂದು ಕಟ್ಟಿ ಹೋಗಿ" ಅಂತ  ರಾಜೀವನಿಗೆ ಕರೆ ಬಂದಿತು.

"ಓ! ಇದು ಬೇರೆ, ಇಂದು ಸಂಜೆನೇ ಬಂದು ಕಟ್ಟುತ್ತೀನಿ ಸರ್" ಎಂದು ಹೇಳಿ ಸಂಜೆ ವೃದ್ಧಾಶ್ರಮಕ್ಕೆ ಹೊರಟ.

ಹಣ ಕಟ್ಟಿ ಅಪ್ಪ ಎಲ್ಲಿದ್ದಾನೋ ನೋಡಿ ಬರುವ ಒಮ್ಮೆ ಅಲ್ಲಿನ ಅಂಗಳಕ್ಕೆ ಬರುವಾಗಲೇ ಅಲ್ಲಿನ ಸಿಬ್ಬಂದಿ ವರ್ಗದ ಜೊತೆ ಅನ್ನೋನ್ಯವಾಗಿ ಅಪ್ಪ ಅವರ ಹೆಗಲ ಮೇಲೆ ಕೈ ಹಾಕಿ, ಕುಲು ಕುಲು ಎಂದು ನಗಾಡುತ್ತಾ ಮಾತನಾಡುತ್ತಿರುವುದು ಕಂಡಿತು ರಾಜೀವನಿಗೆ. ಅವನಿಗೆ ಆಶ್ಚರ್ಯವಾಗಿತ್ತು. 'ಎಲ್ಲರೂ ವೃದ್ಧಾಶ್ರಮ ಎಂದರೆ ಜೈಲ್ನಲ್ಲಿ ಇರುವಂತೆ ಅನ್ನುತ್ತಿದ್ದರೂ ಅಪ್ಪ ಹೀಗೆ ಖುಷಿಯಾಗಿ ಇದ್ದಾರಲ್ಲ ಹೇಗೆ?'  ಎಂದು ಯೋಚಿಸಿ ಅಲ್ಲಿ ಇದ್ದ ವೃದ್ಧಾಶ್ರಮದ ಸಿಬ್ಬಂದಿ ವರ್ಗದ ಕೊಠಡಿ ಹೋಗಿ ಅಲ್ಲಿದ್ದ ವ್ಯಕ್ತಿಯನ್ನು ಕರೆದು,
"ಅಲ್ಲಿದ್ದಾರಲ್ಲ ಆ ವ್ಯಕ್ತಿ , ಇಲ್ಲಿನ ಜನಗಳಿಗೆ ಎಷ್ಟು ವರ್ಷದಿಂದ ಗೊತ್ತು? ಅಷ್ಟೊಂದು ಅನ್ನೋನ್ಯವಾಗಿ ಮಾತಾಡುತ್ತಿದ್ದಾರಲ್ಲ?" ಎಂದು ಕೇಳಿದ.

"ಯಾರು ಸಾರ್, ಆ ನೀಲಿ ಶರ್ಟ್ ಹಾಕಿದ್ದರಲ್ಲ ಅವರಾ ? ಸುಮಾರು ವರ್ಷದಿಂದ ಗೊತ್ತು ಸಾರ್ ಅವರು ಸುಮಾರು ಮೂವತ್ತು ವರ್ಷದ ಹಿಂದೆ ನಮ್ಮದೇ ಅನಾಥಾಶ್ರಮದಿಂದ ಒಂದು ಅನಾಥ ಗಂಡು ಮಗುನ  ದತ್ತು ತಗೊಂಡು ಹೋಗಿದ್ರು ಸಾರ್, ಅವಾಗಿಂದ ಪರಿಚಯ ಸಾರ್. ಪ್ರತಿವರ್ಷ ಆ ಮಗು ಹುಟ್ಟು ಹಬ್ಬಕ್ಕೆಇಲ್ಲಿ  ಬಂದು ಸಿಹಿ ಹಂಚ್ತಾರೆ.. ಅಂದ ಹಾಗೆ ತಾವು ಯಾರು ಸಾರ್..? " ಎಂದು ಆ ವ್ಯಕ್ತಿ ರಾಜೀವನನ್ನ ಕೇಳಿದ.

---
ಇದು ಮುಂಬಯಿ ಆಕಾಶವಾಣಿ, ವಿವಿಧ ಭಾರತಿ ಯಲ್ಲಿ ಕೇಳಿದ ಒಂದು ಪೋಸ್ಟ್ ಕಾರ್ಡ್ ಕಥೆಯ ಎಳೆಯನ್ನು ವಿಸ್ತರಿಸಿ ಬರೆದದ್ದು.

No comments: