Saturday, March 22, 2025

ಕನ್ನಡ - ಕನ್ನಡಿಗರು - ಹೋರಾಟ


ಬೆಳಗಾವಿ ಎಲ್ಲಿ ಚಾಮರಾಜನಗರವೆಲ್ಲಿ? ಸುಮಾರು ೪೦೦ - ೬೦೦ ಕಿ. ಮೀ. ದೂರ. 

ಇತ್ತೀಚೆಗೆ ಭಾಷಾವಾರು ಗಲಾಟೆ ಕನ್ನಡ ಮತ್ತು ಮರಾಠಿಗರ ಬೆಳಗಾವಿಯಲ್ಲಿ ನಡುವೆ ನಡೆಯಿತು. ಅದೂ ಸರ್ಕಾರಿ ನೌಕರರ ಮೇಲೆ ನಡೆದ ದೌರ್ಜನ್ಯ. ಗಡಿ ಪ್ರದೇಶವಾದ ಬೆಳಗಾವಿಯಲ್ಲಿ ಹಿಂದಿನಿಂದಲೂ ಮರಾಠಿಗರ ಪ್ರಾಬಲ್ಯವಿದೆ. ಹಾಗಂತ ಕನ್ನಡ, ಕನ್ನಡಿಗರೇನು ಕಡಿಮೆಯಿಲ್ಲ. ಇಲ್ಲಿ ಮುಖ್ಯವಾಗಿ ಅವಲೋಕಿಸಬೇಕಾಗಿರೋದು ಗಡಿನಾಡನಲ್ಲಿರುವ ಕನ್ನಡ ಭಾಷೆ ಹಾಗೂ ಕನ್ನಡಿಗ ಜನತೆಯ ಭದ್ರತೆ, ಅಳಿವು ಉಳಿವಿನ ಸೂಕ್ಷ್ಮತೆಯ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ. 

ಈಗ ಬೆಳಗಾವಿ-ಚಾಮರಾಜನಗರ ಎಲ್ಲಿಯ ನಂಟು ಎಂದಾಗ, ಭಾಷೆ-ನೆಲ-ಜಲ ವಿಷಯಕ್ಕೆ ತೊಂದರೆ ಬಂದಾಗ ಮೊದಲು ಒಂದು ಹೆಸರು ಕೇಳಿಬರೋದು ವಾಟಾಳ್ ನಾಗರಾಜ್. ಕರ್ನಾಟಕದ ಭಾಷೆಯ ವಿಷಯದಲ್ಲಿ ವಾಟಾಳ್ ನಾಗರಾಜ್ ಮುಂಚೂಣಿಯಲ್ಲಿ ಬರುತ್ತದೆ. ಅವರಿಂದಲೇ ಮೂಲಗೊಂಡು ಇತ್ತೀಚಿನ ಹಲವು ರಕ್ಷಣಾ ವೇದಿಕೆಗಳು ಹುಟ್ಟಿಕೊಂಡವು. 

ಮೊದಲೇ ಹೇಳಿದ ಹಾಗೆ ಭಾಷೆ, ನೆಲ, ಜಲ ವಿಷಯಗಳು ಬಂದಾಗ ವಿನೂತನ ರೀತಿಯಲ್ಲಿ ಚಳುವಳಿ ಮಾಡುತ್ತ, ವಿರೋಧ ವ್ಯಕ್ತಪಡಿಸುವ ಧೀಮಂತ ವ್ಯಕ್ತಿ ವಾಟಾಳ್ ಮಾದಪ್ಪ ನಾಗರಾಜ್. ೨೦೦೫ರ ವರೆಗೂ ಅವರು ವಿಧಾನಸಭೆ ಸೋಲುವವರೆಗೂ ಅವರ ಈ ಚಳುವಳಿ ಪ್ರಾಬಲ್ಯ ಚೆನ್ನಾಗಿತ್ತು. ಸೋಲಿನ ನಂತರ ಅವರ ಮಾನಸಿಕವಾಗಿ ಕುಗ್ಗಿದರು. ಆದರೂ ತಮ್ಮ ಭಾಷೆ-ಜಲ-ನೆಲ-ಜನತೆಯ ಹಿತಕ್ಕಾಗಿ ನ್ಯಾಯವಾಗಿ ಹೋರಾಡುತ್ತಿದ್ದ ಆ ವ್ಯಕ್ತಿಯನ್ನು ಚುನಾವಣೆಯಲ್ಲಿ ಸೋಲಿಸಿದ್ದು ಒಂದು ಕರ್ನಾಟಕದ ಹಾಗೂ ಚಾಮರಾಜನಗರ ಜನತೆಯ ಒಂದು ದೌರ್ಭಾಗ್ಯವೆ  ಸರಿ.

ಅದೇನೇ ಇರಲಿ ಅಲ್ಲಿ ಬೆಳಗಾವಿಯಲ್ಲಿ ಕನ್ನಡಕ್ಕೆ, ಕನ್ನಡಿಗರಿಗೆ ತೊಂದರೆಯಾದಾಗ ಜೋರಾಗಿ ಕೂಗಿದ್ದು ಇಲ್ಲಿನ ಚಾಮರಾಜನಗರದ ಈ ವ್ಯಕ್ತಿ ವಾಟಾಳ್ ನಾಗರಾಜ್. ಅದು ನರಿಯ ಕೂಗು ಗಿರಿಗೆ ಕೇಳದಂತಾಗಿದೆ, ಅರಣ್ಯರೋಧನವಾಗಿದೆ. 

ಒಂದೆಡೆ ಭಾಷೆ-ನೆಲ-ಜಲಕ್ಕಾಗಿ ಹಿಂದಿನಿಂದಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಯಾಕೆ ಅಂತ ಯೋಚಿಸಿದರೆ ಕನ್ನಡಿಗರು ಶಾಂತಿಪ್ರಿಯರು, ಎಲ್ಲವನ್ನು ಎಲ್ಲರನ್ನು ಸುಲಭವಾಗಿ ಒಪ್ಪಿಕೊಳ್ಳುವವರು, ಅನ್ಯ ಭಾಷೆಗಳನ್ನು ಮಾತಾಡಬಲ್ಲರು, ಅನ್ಯ ಭಾಷಿಗರನ್ನು ನಮ್ಮವರಂತೆಯೇ ಒಪ್ಪಿಕೊಳ್ಳುವವರು ... ಇದೆಲ್ಲ ಹೆಮ್ಮೆಯ ವಿಷಯವೇ ಸರಿ. ಅದಕ್ಕಿಂತ ಮೊದಲು ಕಾಣಿಸುವುದು ದುರ್ಬಲ ರಾಜಕೀಯ ನಾಯಕರು.  ಕನ್ನಡಕ್ಕೆ, ಕನ್ನಡಿಗರಿಗೆ ತೊಂದರೆಯಾಗುತ್ತಿರುವಾಗ ಮೂಕಪ್ರೇಕ್ಷರಾಗಿ ಇದ್ದಾರೆ ಈ ದುರ್ಬಲ ರಾಜಕೀಯ ವ್ಯಕ್ತಿಗಳು.

ಒಂದೆಡೆ ಕನ್ನಡ ನುಡಿಗಾಗಿ, ನೀರಿಗಾಗಿ - ಕಾವೇರಿ, ಮಹದಾಯಿ, ಕೃಷ್ಣ ನದಿ ಹೋರಾಟ, ನಮ್ಮದೇ ರಾಜ್ಯದ  ಗಡಿಯಲ್ಲಿ ಜನತೆಯ ಮೇಲಿನ ದೌರ್ಜನ್ಯ,  ಆರ್ಥಿಕ ವ್ಯವಹಾರದಲ್ಲಿ, ಕೇಂದ್ರ ಸರ್ಕಾರೀ ಹಾಗೂ ಖಾಸಗಿ ಕಚೇರಿಗಳಲ್ಲಿ ಅನ್ಯ ರಾಜ್ಯದವರ ದಬ್ಬಾಳಿಕೆ, ಗಡಿ ಪ್ರದೇಶಗಳ ಕಳೆದುಕೊಳ್ಳುವ ಭೀತಿ ಇವೆಲ್ಲವನ್ನೂ ಮೂಕವಾಗಿಯೇ ತಮ್ಮದಲ್ಲ ಎನ್ನುವಂತೆ ಇರುವ  ರಾಜಕೀಯ ನಾಯಕರು (ವಂಶ ಪಾರಂಪರ್ಯ, ದುಡ್ಡು ಮಾಡುತ್ತಿರುವ), ಸಾಹಿತಿಗಳು (ಪ್ರಶಸ್ತಿಗಳಿಗಾಗಿಯೇ ಬರೆಯುವ), ಬುದ್ಧಿಜೀವಿಗಳು (ಧರ್ಮದ, ಜಾತಿಯ ಹೆಸರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ),  ಹೆಸರಾಂತ ಕನ್ನಡ ಚಲನಚಿತ್ರ ತಾರೆಗಳು (ಪ್ಯಾನ್ ಇಂಡಿಯಾ ಚಲನಚಿತ್ರಗಳದ್ದೇ ಯೋಚನೆ ಮಾಡುತ್ತಿರುವ), ಪಕ್ಕದಲ್ಲೇ ಬೆಂಕಿಬಿದ್ದರೂ ರೀಲ್ಸ್ಗಳನ್ನೂ, ಮೊಬೈಲ್ ನಲ್ಲೆ ಸರ್ವ ಲೋಕವನ್ನೂ, ಅನ್ಯಭಾಷೆಯ ಟಿ ವಿ ಚಾನೆಲ್ ಗಳನ್ನೂ, ಧಾರಾವಾಹಿಗಳನ್ನು, ಚಲನಚಿತ್ರಗಳನ್ನು ಬೆಂಬಲಿಸುತ್ತಿರುವ, ಸಾಮಾನ್ಯ ಕನ್ನಡ ಪ್ರಜೆಗಳು, ಕಾರ್ಮಿಕ ಸಂಘಟನೆಗಳು ಮೂಕವಾಗಿದ್ದಾರೆ.

ಇನ್ನೊಂದು ಮಾತೆಂದರೆ ಸುಮಾರು ೨೦೦೦ ವರ್ಷ ಇತಿಹಾಸವುಳ್ಳ ಕನ್ನಡ ಭಾಷೆ, ನೆಲ, ಜಲ, ಗಡಿ, ವ್ಯವಹಾರ, ನೌಕರಿಗಳಿಗಾಗಿ ಕನ್ನಡ  ಜನತೆ ಹೋರಾಡಬೇಕಾಗಿರುವುದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿರುವುದು ಒಂದು ದುರದೃಷ್ಟ ಮತ್ತು ವಿಷಾದದ ಸಂಗತಿಯೇ ಸರಿ. ಇದು  ಕನ್ನಡಿಗರ ತೆರೆದ ವಿಶಾಲ ಮನಸ್ಸೋ ದೌರ್ಭಾಗ್ಯವೊ ಅಸಹಾಯಕತೆಯೋ ತಿಳಿಯದು.

--------------------------------------------------------------------------------------------------------------------